ವರದಿಗಾರರು :
ನಾ.ಅಶ್ವಥ್ ಕುಮಾರ್, ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
25-11-2025
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಚಾಮರಾಜನಗರ : ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮಕ್ಕಾಗಿ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರು ನಗರಕ್ಕೆ ಭೇಟಿ ನೀಡಿದ ಕೆಲವೇ ದಿನಗಳ ಬಳಿಕ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಗಳು ಸೋಮವಾರ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಲಿ ಎಂದು ಸಂಕಲ್ಪ ಮಾಡಿದರು
ಶ್ರೀ ಚಾಮರಾಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಬೆಂಬಲಿಗರು ಡಿ.ಕೆ. ಶಿವಕುಮಾರ್ ರವರ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಸಿದ್ದು, ನಂತರ ದೇವಾಲಯದ ಹೊರಾಂಗಣದಲ್ಲಿ ಇಡುಗಾಯಿ ಹೊಡೆದು ರಾಜಕೀಯ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಒಕ್ಕಲಿಗ ಮುಖಂಡ ಚಾ.ರಂ. ಶ್ರೀನಿವಾಸಗೌಡ ಅವರು, “ಡಿ.ಕೆ. ಶಿವಕುಮಾರ್ ತಕ್ಷಣ ಮುಖ್ಯಮಂತ್ರಿಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಪೂಜೆ ಮತ್ತು ಇಡುಗಾಯಿ ಮೂಲಕ ನಮ್ಮ ಸಂಕಲ್ಪ ವ್ಯಕ್ತಪಡಿಸಿದ್ದೇವೆ ,” ಎಂದು ತಿಳಿಸಿದರು
ಅವರು ಮುಂದುವರಿದು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಚಾಮರಾಜೇಶ್ವರ ಸನ್ನಿಧಿಗೆ ಬಂದು ಅಧಿವೇಶನ ನಡೆಸಿದರೆ ರಾಜಕೀಯವಾಗಿ ಇನ್ನಷ್ಟು ಬಲಿಷ್ಠರಾಗುವರು ಎಂಬ ನಂಬಿಕೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರು ಚಾಮರಾಜನಗರಕ್ಕೆ ಈಗಾಗಲೇ 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿರುವುದನ್ನು ಉಲ್ಲೇಖಿಸಿದ ಶ್ರೀನಿವಾಸಗೌಡ, “ಅಧಿಕಾರ ಹಂಚಿಕೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎನ್ನುವುದಕ್ಕಾಗಿ ಪೂಜೆ ಹಾಗೂ ಇಡುಗಾಯಿ ನೆರವೇರಿಸಲಾಗಿದೆ,” ಎಂದು ಹೇಳಿದರು.
