ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
25-10-2025
ದಾವಣಗೆರೆಯಲ್ಲಿ ಅ.26ಕ್ಕೆ ಕುರುಬರ ರಾಜ್ಯಮಟ್ಟದ “ನೀವೂ ನಾಯಕರಾಗಿ” ಚಿಂತನ-ಮಂಥನ
ದಾವಣಗೆರೆ: ಕುರುಬ ಸಮುದಾಯದ ರಾಜಕೀಯ ಸಬಲೀಕರಣ ಹಾಗೂ ಎಸ್.ಟಿ. ಮೀಸಲಾತಿ ವಿಷಯದಲ್ಲಿ ಜಾಗೃತಿ ಮೂಡಿಸಲು “ಹಾಲುಮತ ಮಹಾಸಭಾ” ವತಿಯಿಂದ ಅಕ್ಟೋಬರ್ 26ರಂದು ನಗರದ ಕನ್ನಡ ಭವನದಲ್ಲಿ ರಾಜ್ಯಮಟ್ಟದ “ನೀವೂ ನಾಯಕರಾಗಿ” ಚಿಂತನ-ಮಂಥನ ಮತ್ತು ಮಾಹಿತಿ–ಜಾಗೃತಿ ಸಭೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ.
ರಾಜ್ಯ ಸಂಚಾಲಕ ರಾಜು ಮೌರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದಂತೆ, ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇರುವ ಕುರುಬ ಸಮುದಾಯದವರು ಈ ಸಭೆಯಲ್ಲಿ ಭಾಗವಹಿಸಬಹುದು. ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಸಮುದಾಯದವರ ಏಕತೆಯ ಅಗತ್ಯತೆ, ಚುನಾವಣಾ ತಯಾರಿ, ಸೋಷಿಯಲ್ ಮೀಡಿಯಾ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಯಕರು, ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮಹಾನಗರಪಾಲಿಕೆ ಮೇಯರ್‌ರಿಗೆ “ಅಭಿಮಾನ ಅಭಿನಂದನೆ” ಕಾರ್ಯಕ್ರಮದ ಮೂಲಕ ಗೌರವ ಸನ್ಮಾನ ಸಲ್ಲಿಸಲಾಗುವುದು.
ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ನಡೆಯುವ *“ಕುರುಬರ ಎಸ್.ಟಿ. ಮೀಸಲಾತಿ ಮಾಹಿತಿ–ಜಾಗೃತಿ ಸಭೆ”*ಯಲ್ಲಿ, ಕುರುಬರು ಮತ್ತು ಅದರ ಉಪವರ್ಗಗಳು ಎಸ್.ಟಿ. ಪಟ್ಟಿಗೆ ಸೇರಬೇಕೆಂಬ ಹೋರಾಟದ ಪ್ರಸ್ತುತ ಸ್ಥಿತಿ, ಸರಕಾರದ ಶಿಫಾರಸ್ಸು ಪ್ರಕ್ರಿಯೆ ಹಾಗೂ ಮುಂದಿನ ಹಂತಗಳ ಕುರಿತು ಚರ್ಚೆ ನಡೆಯಲಿದೆ.
ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಹಾಲುಮತ ಮಹಾಸಭಾ ಪದಾಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ನಾಯಕರು ಭಾಗವಹಿಸಲಿದ್ದಾರೆ.
ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷ ಜಿ. ಷಣ್ಮುಖಪ್ಪ, ಘನರಾಜ್, ಎಸ್. ಎಂ. ಸಿದ್ದಲಿಂಗಪ್ಪ, ಗಿರೀಶ್ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.
