ವರದಿಗಾರರು :
ಶಿವು ರಾಠೋಡ ||
ಸ್ಥಳ :
ಹುಣಸಗಿ
ವರದಿ ದಿನಾಂಕ :
28-11-2025
"ತೆರಿಗೆ ಸಂಗ್ರಹಣೆಗೆ ಹುಣಸಗಿಯಲ್ಲಿ ವಿಶೇಷ ಜಾಗೃತಿ–ಸಮೀಕ್ಷಾ ಅಭಿಯಾನ"
ಹುಣಸಗಿ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ “ತೆರಿಗೆ ವಸೂಲಾತಿ ವಿಶೇಷ ಅಭಿಯಾನ” ಜಾರಿಗೊಳಿಸುವ ಉದ್ದೇಶದಿಂದ ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ ಅವರಿoದ ಗ್ರಾಮಗಳಿಗೆ ಭೇಟಿ ನೀಡಲಾಯಿತು. ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳು ವಿಕೇಂದ್ರೀಕೃತ ವ್ಯವಸ್ಥೆಯ ಸಶಕ್ತ ಕೇಂದ್ರಗಳಾಗಿ ಕೆಲಸ ಮಾಡಲು ಆರ್ಥಿಕ ಸಬಲೀಕರಣ ಅತ್ಯವಶ್ಯಕ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ನಿಯಮ 1993ರ ಧಾರಾ 200(7) ಅನ್ವಯ ಗ್ರಾಮ ಪಂಚಾಯಿತಿಗಳು ಶೇ.100 ರಷ್ಟು ತೆರಿಗೆ ವಸೂಲಿ ಮಾಡುವ ಹೊಣೆಗಾರಿಕೆ ಹೊಂದಿವೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಂದು ಗ್ರಾಮ ಪಂಚಾಯಿತಿಯೂ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತೆರಿಗೆ ವಸೂಲಾತಿಯನ್ನು ವಿಶೇಷ ಅಭಿಯಾನವಾಗಿ ಮುಂದೂಡಬೇಕು ಎಂದು ಸೂಚಿಸಲಾಗಿದೆ.
ಹುಣಸಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ವಸೂಲಾತಿ ತಂಡಗಳನ್ನು ರಚಿಸಿ ಕಡ್ಡಾಯವಾಗಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಬಸಣ್ಣ ನಾಯಕ ನಿರ್ದೇಶನ ನೀಡಿದ್ದಾರೆ. ತಾಲೂಕಿನಲ್ಲಿ ಕುಂಠಿತಗೊಂಡಿದ್ದ ಕಂದಾಯ ವಸೂಲಾತಿ ಪ್ರಗತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಕೂಡಲೇ ವಿಶೇಷ ಅಭಿಯಾನ ಕೈಗೊಳ್ಳಬೇಕು , ಪ್ರಗತಿ ಸಾಧಿಸಲು ವಿಫಲವಾದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಜಿ.ಪಂ. ಸಿಇಒ ಅವರ ಆದೇಶದಂತೆ ತೆರಿಗೆ ವಸೂಲಾತಿ ಅಭಿಯಾನ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಬಸಣ್ಣ ನಾಯಕ ಅವರು ಮುದನೂರ, ಕನ್ನಳ್ಳಿ, ಹೆಬ್ಬಾಳ ಹಾಗೂ ರಾಜನಕೊಳೂರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಭಿಯಾನದ ಪ್ರಗತಿ ಪರಿಶೀಲಿಸಿದರು. ಮನೆಮನೆಗೂ, ಅಂಗಡಿ–ಮುಗಟ್ಟುಗಳಿಗೂ ಭೇಟಿ ನೀಡಿ ಸಾರ್ವಜನಿಕರಿಗೆ ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಿಸಿದರು. ಪಂಚಾಯತ್ ಸಿಬ್ಬಂದಿಗೆ ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡುವಂತೆ ಸೂಚನೆ ನೀಡಿದರು.
