ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
26-12-2025
ಮನುಸ್ಮೃತಿ ದಹನ ದಿನ
1927ರ ಡಿಸೆಂಬರ್ 25ರಂದು ಮಹಾಮಾನವ ಡಾ. ಬಿ.ಆರ್. ಅಂಬೇಡ್ಕರ್ ಅವರು ಶ್ರೇಣಿಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗಭೇದ, ಮಹಿಳೆಯರ ಮೇಲಿನ ದಬ್ಬಾಳಿಕೆ ಸೇರಿದಂತೆ ಅನಿಷ್ಟ ಸಾಮಾಜಿಕ ಪದ್ಧತಿಗಳ ಮೂಲವಾಗಿದ್ದ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದ ಐತಿಹಾಸಿಕ ದಿನಕ್ಕೆ ಇಂದು 98 ವರ್ಷಗಳು ಪೂರ್ಣಗೊಂಡಿವೆ.
ಜಾತಿ, ಮೇಲು–ಕೀಳು ಭಾವನೆ, ಸತಿಸಹಗಮನ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಬತ್ತಲೆ ಸೇವೆ ಮುಂತಾದ ಅನೇಕ ಅನ್ಯಾಯಗಳಿಗೆ ಕಾರಣವಾಗಿದ್ದ ಮನುವಾದಿ ಸಂಹಿತೆಗೆ ಡಾ. ಅಂಬೇಡ್ಕರ್ ಅವರು ಬೆಂಕಿ ಹಚ್ಚುವ ಮೂಲಕ ಸಮಾನತೆ, ಸ್ವಾತಂತ್ರ‍್ಯ ಹಾಗೂ ಭಾತೃತ್ವದ ಹೋರಾಟಕ್ಕೆ ದಿಕ್ಕು ತೋರಿಸಿದ್ದರು.ಸ್ವಾತಂತ್ರ‍್ಯ ಭಾರತಕ್ಕೆ ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿದ ಡಾ. ಅಂಬೇಡ್ಕರ್ ಅವರ ಕೊಡುಗೆ ಅಮೂಲ್ಯವಾಗಿದ್ದು, ಸಂವಿಧಾನ ಅಂಗೀಕಾರದ ಸಂದರ್ಭದಲ್ಲಿಯೇ ಕೆಲವು ಸಂಘಟನೆಗಳು ಸಂವಿಧಾನದ ವಿರುದ್ಧ ಅಸಹನೆಯನ್ನು ವ್ಯಕ್ತಪಡಿಸಿದ್ದವು.
ಇಂದಿಗೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸವಾಲುಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ದಲಿತ ಸಂಘರ್ಷ ಸಮಿತಿ ಅಭಿಪ್ರಾಯಪಟ್ಟಿದೆ.ಈ ಹಿನ್ನೆಲೆಯಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಸ್ಮರಣಾರ್ಥವಾಗಿ ಹಾಗೂ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ದಲಿತ ಸಂಘರ್ಷ ಸಮಿತಿ ಬೀದರ್ ಜಿಲ್ಲಾ ಶಾಖೆಯ ಜಿಲ್ಲಾ ಸಂಚಾಲಕ ತುಕಾರಾಮ ಲಾಡಕರ ಅವರ ನೇತೃತ್ವದಲ್ಲಿ ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾಂಕೇತಿಕವಾಗಿ ಮನುಸ್ಮೃತಿ ದಹನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮದಲ್ಲಿ ಸಂದೀಪ ಕಾಟೆ, ಪ್ರದೀಪ ನಾಟೇಕರ್, ಶಿವಕುಮಾರ ನೀಲಕಟ್ಟಿ, ರವೀಂದ್ರ ಗೌಂಡೆ, ಸುನೀಲ ಸಂಗಮ, ಶಿವರಾಜ ಲಾಡಕರ, ರಾಜಕುಮಾರ ಚಂದನ, ವಿಠಲ ಲಾಡೆ, ಮಲ್ಲಿಕಾರ್ಜುನ ಭಂಡಾರಿ, ಶ್ರೀಪತರಾವ ದೀನೆ ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
