ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
02-11-2025
ಸೇವಾ ಕಾಯಂಗೊಳಿಸಿ ಅತಿಥಿ ಉಪನ್ಯಾಸಕರಿಗೆ ಭದ್ರತೆ ನೀಡಿ – ಪಾಲಿಟೆಕ್ನಿಕ್ ಉಪನ್ಯಾಸಕರ ಸಂಘದ ಮನವಿ
ಬೀದರ: ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘದ ಪ್ರತಿನಿಧಿಗಳು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದ 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸುಮಾರು 1,600 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಇವರಿಗೆ ಯಾವುದೇ ಸೇವಾ ಭದ್ರತೆ ಕಲ್ಪಿಸಲಾಗಿಲ್ಲ, ಎಂದು ಸಂಘದ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ತಿಳಿಸಿದರು.
ಇತರೆ ಸರ್ಕಾರಿ ಇಲಾಖೆಗಳ ಗುತ್ತಿಗೆ ನೌಕರರಿಗೆ ವರ್ಷಪೂರ್ತಿ ವೇತನ ನೀಡಲಾಗುತ್ತಿದ್ದರೆ, ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರಿಗೆ ಕೇವಲ 10 ತಿಂಗಳ ವೇತನ ಮಾತ್ರ ನೀಡಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.
ಸಂಘದ ಪ್ರಮುಖ ಬೇಡಿಕೆಗಳು ಹೀಗಿವೆ:
ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ಸೇವಾ ಭದ್ರತೆ ನೀಡಬೇಕು.
“ಸಮಾನ ಕೆಲಸಕ್ಕೆ ಸಮಾನ ವೇತನ” ತತ್ವ ಅನುಸರಿಸಬೇಕು (ಗುಜರಾತ್, ಹರಿಯಾಣ ಮಾದರಿ).
ಪ್ರಶ್ನೆಪತ್ರ ಮೌಲ್ಯಮಾಪನ ಹಾಗೂ ತರಬೇತಿಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕು.
ಮಹಿಳಾ ಉಪನ್ಯಾಸಕರಿಗೆ ಹೆರಿಗೆ ರಜೆ ನೀಡಬೇಕು.
ವೇತನವನ್ನು ಪ್ರತೀ ತಿಂಗಳು ನಿಯಮಿತವಾಗಿ ಬಿಡುಗಡೆ ಮಾಡಬೇಕು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಕಾಂತ ವಿಶ್ವಕರ್ಮ ಹಾಗೂ ಪ್ರಮುಖರಾದ ಸಂತೋಷ್ ಲದ್ದೆ, ನಿತೀಶ್ ಕಾರಬಾರಿ, ಶರಣಬಸಪ್ಪ ವಾಲೆ, ಅವಿನಾಶ್, ಗೋವಿಂದ ನಾಯಕ್, ಫಾತಿಮಾ ಫಾರೂಕ್, ಕೀರ್ತಿ ಹಾಪಲಿ, ಅಶ್ವಿನಿ, ಪೂರ್ಣಿಮಾ ಸ್ವಾಮಿ, ಪ್ರವೀಣ್ ತೋರಣೆ, ಹುಸ್ನಜಬೀನ್ ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
