ವರದಿಗಾರರು :
ಹರೀಶ್ ||
ಸ್ಥಳ :
ಬೀದರ್,
ವರದಿ ದಿನಾಂಕ :
03-11-2025
ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ಅಮಾನತು 15ನೇ ಹಣಕಾಸು ಯೋಜನೆ ದುರುಪಯೋಗ – ನಿಯಮ ಉಲ್ಲಂಘನೆ ಆರೋಪ
ಬೀದರ್, ನವೆಂಬರ್ 3: ಸರ್ಕಾರದ ಮಹತ್ವಾಕಾಂಕ್ಷಿ 15ನೇ ಹಣಕಾಸು ಯೋಜನೆ (2024–25) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಿಧಿ ದುರುಪಯೋಗ ಮಾಡಿದ ಆರೋಪದ ಮೇಲೆ ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ರಮೇಶ್ ಮಿಲಿಂದಕರ್ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ ಬಂದೋಲೆ ಅಮಾನತು ಮಾಡಿದ್ದಾರೆ.
ಮಿಲಿಂದಕರ್ ಅವರು ಯಾವುದೇ ಗ್ರಾಮ ಸಭೆ ಅಥವಾ ಸಾಮಾನ್ಯ ಸಭೆ ನಡೆಸದೆ, ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡದೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿಗಳನ್ನು ನಡೆಸಿ ಬಿಲ್‌ಗಳನ್ನು ಪಾವತಿಸಿದ್ದಾಗಿ ದೂರುಗಳಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯತ್ ಸದಸ್ಯ ದೇವೇಂದ್ರ ಬಿ. ಪವಾರ ಅವರು ಪಿಡಿಒ ವಿರುದ್ಧ ದೂರು ಸಲ್ಲಿಸಿದ್ದು, ಅವರು ನಿಧಿ–1 ಮತ್ತು ನಿಧಿ–2 ಖಾತೆಗಳ ವಿವರ ನೀಡದೇ, 15ನೇ ಹಣಕಾಸು ಯೋಜನೆಯಡಿ ಅನಿಯಮಿತವಾಗಿ ಹಣ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರು ಪ್ರಕಾರ ನಿಧಿ–1 ಮತ್ತು ನಿಧಿ–2 ಖಾತೆಗಳಿಂದ ಸುಮಾರು ₹22 ಲಕ್ಷ ಹಾಗೂ 15ನೇ ಹಣಕಾಸು ಯೋಜನೆಯಡಿ ₹37 ಲಕ್ಷ ವೆಚ್ಚ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಹುಲಸೂರ ಗ್ರಾಮ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದರು.
ತನಿಖಾ ಅಧಿಕಾರಿಗಳಿಂದ ಸಲ್ಲಿಸಲಾದ ಜಂಟಿ ಪರಿಶೀಲನಾ ವರದಿಯಲ್ಲಿ, ಪಿಡಿಒ ಮಿಲಿಂದಕರ್ ಅವರು ಸರ್ಕಾರದ ನಿಯಮ ಉಲ್ಲಂಘಿಸಿ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಸಿಇಒ ಡಾ. ಗಿರೀಶ ಬಂದೋಲೆ ಅವರು ಪಿಡಿಒ ಅವರನ್ನು ಸೇವೆಯಿಂದ ಅಮಾನತು ಮಾಡುವುದರ ಜೊತೆಗೆ, ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ (KCSR) ಅಡಿ ವಿಭಾಗೀಯ ವಿಚಾರಣೆ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು, ಆದರೆ ಕೆಸಿಎಸ್ಆರ್ ನಿಯಮ 98 ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
