ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
25-12-2025
ಚಿಕ್ಕತುಷ್ಟೂರಿನಲ್ಲಿ 13.5 ಎಕರೆ ವ್ಯಾಪ್ತಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣ
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಷ್ಟೂರು ಬಳಿ 13.5 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪರು ಗ್ರಾಮದ ನಿರ್ಮಾಣವಾಗುತ್ತಿರುವ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅನ್ನು ಪರಿವೀಕ್ಷಣೆ ಮಾಡಿ ಮಾತನಾಡಿದರು. ಟ್ರಕ್ ಚಾಲಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚಿಕ್ಕತುಷ್ಟೂರು ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಪ್ರಮುಖ ರಸ್ತೆಗಳಲ್ಲಿ ಟರ್ಮಿನಲ್ ಇರಬೇಕು ಎನ್ನುವ ಉದ್ದೇಶದಿಂದ ಡಿ.ದೇವರಾಜು ಅರಸು ಆರಂಭ ಮಾಡಿದರು ಎಂದು ತಿಳಿಸಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ತಾಲೂಕಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 13.5 ಎಕರೆ ಜಾಗ ಕೊಟ್ಟಿದ್ದಾರೆ. ಮುಖ್ಯ ರಸ್ತೆಯಲ್ಲಿ ಇದ್ದರೆ ಚೆನ್ನಾಗಿರುತ್ತಿತ್ತು. ಆದರೆ ಜಾಗದ ಕೊರತೆಯಿಂದ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರ ಇದೆ. ಸದ್ಯ ಲಾರಿಗಳು ಈಗ ನಿಲ್ಲಿಸಿಕೊಳ್ಳಲಿ, ಯಾವುದೇ ಹಣ ಪಡೆಯುವುದಿಲ್ಲ ಎಂದು ಹೇಳಿದರು.
ಮೈಸೂರಿನ ಬಂಡಿಪಾಳ್ಯದಲ್ಲಿ ಉತ್ತಮವಾದ ಟ್ರಕ್ ಟರ್ಮಿನಲ್ ಇದೆ. ಹುಬ್ಬಳ್ಳಿ-ಧಾರವಾಡದಲ್ಲೂ ಹತ್ತು ಎಕರೆ ಟರ್ಮಿನಲ್ ಇದೆ. ರಾಯಚೂರಿನಲ್ಲಿಯೂ ಆಗುತ್ತಿದೆ. ದಾಂಡೇಲಿಲೂ ಕೂಡ ಮೂರು ಎಕರೆ ಜಾಗವಿದೆ. ಈಗಾಗಲೇ ಹೊಸಪೇಟೆಯಲ್ಲಿ ಟರ್ಮಿನಲ್ ಉದ್ಘಾಟನೆಯಾಗಿದೆ ಎಂದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಲಾರಿ ಚಾಲಕರು ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಿಕೊಂಡು ಮಲಗುತ್ತಿದ್ದು ಅವರಿಗೆ ಸರಿಯಾಗಿ ಊಟ-ತಿಂಡಿ ಮಾಡಲು ಸಮಸ್ಯೆಯಾಗುತ್ತಿದ್ದು ಇದನ್ನೆಲ್ಲ ತಪ್ಪಿಸಿ ಒಂದೇ ಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ತಾಲೂಕಿನಲ್ಲಿ ಟ್ರಕ್ ಟರ್ಮಿನಲ್ ಮಾಡಿರುವುದಕ್ಕೆ ಸಾರಿಗೆ ಸಚಿವರಿಗೆ ಧನ್ಯವಾದ ಹೇಳಿದರು. ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಎಂಡಿ ಶಿವಪ್ರಕಾಶ್ ಮಾತನಾಡಿ, 13.5 ಎಕರೆಯಲ್ಲಿ 293 ಟ್ರಕ್ ನಿಲ್ಲಲು ಅವಕಾಶ ಮಾಡಿಕೊಡುತ್ತಿದೆ. 43 ಏಜೆಂಟ್ ಆಫೀಸ್, 18 ಗೋಡನ್‌ಗೆ ಪ್ರಾತಿನಿಧ್ಯ ನೀಡಲಾಗುತ್ತದೆ. ಜಾಗ ಒತ್ತುವರಿಯಾಗಬಾರದು ಎನ್ನುವ ದೃಷ್ಟಿಯಿಂದ ಈಗಾಗಲೇ ಕಾಂಪೌಂಡ್ ಹಾಕಲಾಗಿದೆ. ಪೆಟ್ರೋಲ್ ಬಂಕ್ ಹಾಗೂ ವೇಬ್ರಿಡ್ಜ್, ಗ್ರೀನ್ ಪಾರ್ಕ್ ಸೇರಿದಂತೆ ಇತರೆ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.
ಟ್ರಕ್ ಟರ್ಮಿನಲ್ ಜಾಗ ಕಪ್ಪು ಮಣ್ಣು ಇರುವುದರಿಂದ ಒಂದು ವರ್ಷದವರೆಗೆ ಲಾರಿ ಓಡಾಟವಾಗಿ ನೆಲ ಭದ್ರವಾದ ನಂತರ ಕಾಂಕ್ರಿಟ್ ಹಾಕಿಸುವಂತೆ ಸಚಿವರು ಸೂಚನೆ ನೀಡಿದ್ದರಿಂದ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಸೈಯದ್ ಅಹಮದ್, ಗ್ರಾಪಂ ಅಧ್ಯಕ್ಷೆ ಮೀನಾ, ಕಾಡಾ ಮಾಜಿ ಅಧ್ಯಕ್ಷ ಹಂಗಳ ನಂಜಪ್ಪ, ಹಾಪ್ ಕಾಮ್ಸ್ ಅಧ್ಯಕ್ಷ ನಾಗೇಶ್ ಸೇರಿದಂತೆ ಇತರರಿದ್ದರು.
