ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
24-12-2025
ದಾವಣಗೆರೆ ಜಿಲ್ಲೆಯ 240 ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳಿದೆಯೇ? ಅವಘಡ ತಪ್ಪಿಸಲು ತಕ್ಷಣ ಪರಿಶೀಲನೆ ಅಗತ್ಯ
ಜಿಲ್ಲೆಯಲ್ಲಿರುವ 240 ಕಾರ್ಖಾನೆಗಳಲ್ಲಿ ಸುರಕ್ಷತಾ ಮಾಪನಗಳನ್ನು ಸಮರ್ಪಕವಾಗಿ ಅಳವಡಿಸಿರುವ ಬಗ್ಗೆ ಪರಿಶೀಲಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಆನಗೋಡು ಸಮೀಪದ ಬನ್ಸಾಲ್ ಆರಾಧ್ಯ ಸ್ಟೀಲ್ ಕಾರ್ಖಾನೆಯನ್ನು ಗುರುತಿಸಿದ್ದು, ಯಾವುದೇ ರೀತಿಯ ಅವಘಡ ಸಂಭವಿಸದಂತೆ ತಂಡಗಳನ್ನು ರಚಿಸಿ ಮುಂಜಾಗ್ರತಾ ಕ್ರಮವಹಿಸಬೇಕು. ಅವಘಡ ಸಂಭವಿಸಿದಾಗ ನಿರ್ವಹಣೆ ಮಾಡುವ ಬಗ್ಗೆ ಮಾರ್ಗದರ್ಶನಗಳನ್ನು ಪಾಲಿಸುವಂತೆ ತಿಳಿಸಿದರು. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಳಿಸಬೇಕು. ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಯನ್ನು ರಚಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಮೆ. ಬನ್ಸಾಲ್ ಆರಾಧ್ಯ ಸ್ಟೀಲ್ ಪ್ರೈ ಲಿ, ದಾವಣಗೆರೆ ಜಿಲ್ಲೆ ಸಂಸ್ಥೆಯು ನೊಂದಣಿಗೆ ಅರ್ಜಿ ಸಲ್ಲಿಸಿದ್ದು, ಈ ಕಾರ್ಖಾನೆ ಪರಿಸರ ಸಂರಕ್ಷಣೆ, ಸುರಕ್ಷತೆ, ಆರೋಗ್ಯ ಸಂರಕ್ಷಣೆ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯಿಂದ ಅನುಮೋದನೆ ಪಡೆದಿರುವ ಬಗ್ಗೆ ಹಾಗೂ 15 ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಎಲ್‌ಪಿಜಿ ಬಳಕೆ ಮಾಡುವ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಪರಿಶೀಲಿಸಿಕೊಂಡು ವರದಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕಾರ್ಖಾನೆಗಳ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥ್ಥಿತರಿದ್ದರು.
