ವರದಿಗಾರರು :
ದರ್ಶನ್ ಎಂ ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
23-12-2025
ಬುದ್ಧಿಶಕ್ತಿ, ವಿವೇಕ ಮತ್ತು ಜ್ಞಾನದಿಂದಲೇ ಹಕ್ಕು–ಸೌಲಭ್ಯಗಳ ಸಾಧನೆ: ಜಿ.ಬಿ. ವಿನಯ್ ಕುಮಾರ್
ಬುದ್ದಿಶಕ್ತಿ, ವಿವೇಕ ಮತ್ತು ಜ್ಞಾನ ಬೆಳೆಸಿಕೊಂಡಾಗ ಮಾತ್ರ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ. ಜೊತೆಗೆ ಧೈರ್ಯವೂ ಇರಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಹೇಳಿದರು
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪದ ಗುರುಭವನದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹರಿಹರ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನ ಮತ್ತು ಡಾ. ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭ, ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ. ಬಿ. ಆರ್. ಅಂಬೇಡ್ಕರ್ ಅವರು ಸ್ವಂತ ಪರಿಶ್ರಮ, ಪುಸ್ತಕಗಳ ಜ್ಞಾನ, ಸಾಧಿಸುವ ಛಲದಿಂದ ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದರು. ಸಮಾಜದಲ್ಲಿನ ಶೋಷಣೆ ಮೆಟ್ಟಿ ನಿಂತು ಸಂವಿಧಾನ ಶಿಲ್ಪಿಯಾಗಿ ಬೆಳೆದರು. ಅವರ ಬದುಕು ನಮಗೆಲ್ಲರಿಗೂ ಆದರ್ಶ. ನಮಗೆ ಸಿಕ್ಕ ಮಹಾನ್ ಶಕ್ತಿ ಮತ್ತು ಮಹಾನ್ ಚೇತನ. ಅವರು ಕೊಟ್ಟ ಸಂವಿಧಾನದಿಂದ ಲಕ್ಷಾಂತರ ಮಂದಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅನುಕೂಲವಾಗಿದೆ ಎಂದು ತಿಳಿಸಿದರು
ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಬಡವರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಿಲ್ಲ. ವ್ಯವಸ್ಥೆಯಲ್ಲಿ ಅಧಿಕಾರ ಕಪಿಮುಷ್ಠಿಯಲ್ಲಿರುವವರ ಮತ್ತು ಶ್ರೀಮಂತರ ಮಕ್ಕಳು ಮಾತ್ರ ಉನ್ನತ ಹುದ್ದೆಗೆ ಹೋಗುತ್ತಿದ್ದಾರೆ. ಶೋಷಿತರು ಮತ್ತು ಬಡವರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕೆಂಬ ನಿಟ್ಟಿನಲ್ಲಿ ಇನ್ ಸೈಟ್ಸ್ ಐಎಎಸ್ ಸಂಸ್ಥೆ ವತಿಯಿಂದ ಉಚಿತವಾಗಿ ಕೋಚಿಂಗ್ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ದೇಶದ ಅತ್ಯುನ್ನತ ಹುದ್ದೆಗಳಿಗೆ ಹೋಗುವ ಕನಸು ಬಿತ್ತುವ ಜೊತೆಗೆ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಇಂದು ರಾಜಕಾರಣ ಹೇಗಿದೆ ಎಂದರೆ ನಮ್ಮನ್ನು ಆಳುವವರು ನಮ್ಮ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮನ್ನು ಬೆಳೆಯಲು ಬಿಡುವುದಿಲ್ಲ. ಆದರೂ ಸವಾಲಾಗಿ ಸ್ವೀಕರಿಸಿ ಬೆಳೆಯಬೇಕಾಗಿದೆ. ನಾವು ಬೆಳೆಯಬೇಕಾದರೆ, ಪ್ರಬಲ ಸ್ಪರ್ಧೆಗಳಿಗೆ ಸವಾಲೊಡ್ಡಲು ಪುಸ್ತಕ ಜ್ಞಾನ, ಪರಿಶ್ರಮ, ಧೈರ್ಯ ಅತ್ಯಗತ್ಯ ಎಂದ ಅವರು, ನಾನು ಸುಮ್ಮನೆ ಕುಳಿತಿದ್ದರೆ ಆಗುತ್ತಿರಲಿಲ್ಲ. ಇನ್ ಸೈಟ್ಸ್ ಐಎಎಸ್ ಸಂಸ್ಥೆ ಕಟ್ಟಿ ಇದುವರೆಗೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಹೋಗಿದ್ದಾರೆ. ದೇಶದ ಪ್ರತಿರಾಜ್ಯದಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಸಂತೋಷದ ವಿಚಾರ ಎಂದು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಡಿಎಸ್ ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, ಹರಿಹರ ತಾಲೂಕು ಡಿಎಸ್ ಎಸ್ ಸಂಚಾಲಕ ಪಿ. ಜೆ. ಮಹಾಂತೇಶ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ವಕೀಲರಾದ ಭಾಗೀರಥಿ, ಡಾ. ನಾಗರಾಜ್, ಹರಿಹರದ ಮುಖಂಡರು, ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
