ವರದಿಗಾರರು :
ಪಾಟೀಲ್ ಶಿವರಾಜ ||
ಸ್ಥಳ :
ವಿಜಯನಗರ
ವರದಿ ದಿನಾಂಕ :
23-12-2025
ಮುದೇನೂರು ಗ್ರಾಮದ ನವೀನ್ ಕುಮಾರ ಕಡಾರಿ ಭಗತ್ ಸಿಂಗ್ ಜನ್ಮಸ್ಥಳ ಬಂಗಾಕ್ಕೆ 2300 ಕಿ.ಮೀ ಸೈಕಲ್ ಪಯಣ
ಹೂವಿನ ಹಡಗಲಿ ತಾಲ್ಲೂಕಿನ ಮುದೇನೂರು ಗ್ರಾಮದಿಂದ ನವೀನ್ ಕುಮಾರ ಕಡಾರಿ ಎಂಬ ಯುವಕ ಭಗತ್ ಸಿಂಗ್ ಜನ್ಮಸ್ಥಳವಾದ ಪಂಜಾಬ್ ನ ಬಂಗಾ ಕ್ಕೆ 2300 ಕಿ.ಮೀ ಕ್ಕಿಂತ ಹೆಚ್ಚಿನ ಸೈಕಲ್ ಪಯಣ ಪ್ರಾರಂಭಿಸಿದ್ದಾನೆ.
ಈ ಹಿಂದೆಯೂ ಕೂಡ ಹೂವಿನ ಹಡಗಲಿ ಯಿಂದ ಸುಭಾಷ್ ಚಂದ್ರ ಬೋಸ್ ರವರ ಜನ್ಮಸ್ಥಳವಾದ ಒಡಿಸ್ಸಾದ ಕಟಕ್ ಗೆ 1600 ಕಿಲೋಮೀಟರ್ ಸೈಕಲ್ ಪಯಣ ನಡೆಸಿದ್ದಾನೆ. ಹಾಗೂ ಈ ಬಾರಿಯೂ ಕೂಡ ಕೊಪ್ಪಳ ಜಿಲ್ಲೆ ಹೇರೆಸಿಂಧೋಗಿ ಗ್ರಾಮದ ಶಿವರಾಯಪ್ಪ ನೀರಲೋಟಿ ಎಂಬುವವರು ಜೊತೆಯಾಗಿದ್ದಾರೆ.
ಸೈಕಲ್‌ಯಾತ್ರೆ ಆರಂಭವಾದರೆ ಪ್ರತಿದಿನ 120 ರಿಂದ 150 ಕಿ.ಮೀ. ಪ್ರಯಾಣ ಮಾಡುತ್ತಾರೆ. ಮಾರ್ಗ ಮಧ್ಯದಲ್ಲಿ ಸಿಗುವ ಶಾಲೆ, ದೇವಸ್ಥಾನಗಳು ಹಾಗೂ ಪೆಟ್ರೋಲ್ ಬಂಕುಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇವರ ಸಾಹಸಿ ಕಾರ್ಯ ಕಂಡು ಕೆಲ ಗ್ರಾಮಸ್ಥರು, ಪೆಟ್ರೋಲ್ ಬಂಕ್ ನ ಮಾಲೀಕರು ಮಲಗಲು ಜಾಗ, ಊಟಕ್ಕೆ ವ್ಯವಸ್ಥೆ ಮಾಡಿ ಪ್ರೀತಿ ತೋರಿಸುತ್ತಾರೆ ಎಂದು ತಿಳಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಮಹನೀಯರ ಜನ್ಮಸ್ಥಳಕ್ಕೆ ಶ್ರಮದ ಮೂಲಕ ತೆರಳಿ ಪಾವನವಾಗಬೇಕೆಂಬುದು ಸೈಕಲ್ ಯಾತ್ರೆಯ ಉದ್ದೇಶ. ಪರಿಸರ ಮತ್ತು ಜೀವವೈವಿಧ್ಯ ಅಭಿಯಾನ ಮೂಲಕ ಜಾಗೃತಿ ಮೂಡಿಸುವುದು ದೇಶಕ್ಕಾಗಿ ಮಾಡುವ ನನ್ನ ಅಳಿಲು ಸೇವೆ. ಇದರಿಂದ ಅತ್ಯಂತ ಖುಷಿ ಹಾಗೂ ಆತ್ಮತೃಪ್ತಿ ಇದೆ ಎಂದು ಸಾಹಸಿ ಸೈಕಲ್ ಯಾತ್ರಿ ನವೀನ್ ಕುಮಾರ್ ಅಭಿಪ್ರಾಯ ತಿಳಿಸಿದರು.
