ವರದಿಗಾರರು :
ಬಸವರಾಜ್ ಪೂಜಾರಿ ||
ಸ್ಥಳ :
ಬೀದರ್
ವರದಿ ದಿನಾಂಕ :
26-10-2025
ಬೀದರ್‌ನಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಸೇನೆ ಎಚ್ಚರಿಕೆ
ಬೀದರ್: ನಗರದ ಅಂಗಡಿ, ಮಳಿಗೆ, ಆಸ್ಪತ್ರೆ, ಕಚೇರಿ ಮುಂತಾದವುಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ. ನಾಮಫಲಕಗಳಲ್ಲಿ ಕನಿಷ್ಠ ಶೇ. 60 ರಷ್ಟು ಕನ್ನಡ ಇರಬೇಕೆಂಬ ಸರ್ಕಾರದ ನಿಯಮ ನಗರದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ತಮ್ಮ ಜಾಂತಿ ಪ್ರಕಟಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಬಳಸದೇ ಇರುವ ನಾಮಫಲಕಗಳನ್ನು ಮುಂದಿನ ದಿನಗಳಲ್ಲಿ ಮಸಿಯಿಂದ ಬರೆದು ಎಚ್ಚರಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ನಗರದ ಸೌಂದರ್ಯ ಹೆಚ್ಚಿಸಲು ರಸ್ತೆ ವಿಭಜಕಗಳ ಮಧ್ಯೆ ಅಳವಡಿಸಿರುವ ಬೀದಿ ದೀಪಗಳಿಗೆ ಕಾರ್ಯಕ್ರಮಗಳ ಬ್ಯಾನರ್ ಅಳವಡಿಸುತ್ತಿರುವುದರ ವಿರುದ್ಧವೂ ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಬೀದಿ ದೀಪಗಳು ಬ್ಯಾನರ್ ಅಳವಡಿಕೆಗೆ ಸೀಮಿತವಾಗಿವೆ ಎಂಬ ಅಸಮಾಧಾನವನ್ನು ಗಣೇಶ ಪಾಟೀಲ ವ್ಯಕ್ತಪಡಿಸಿದರು. ಬ್ಯಾನರ್‌ಗಳಲ್ಲಿ ಕನ್ನಡ ಬಳಕೆಯಿಲ್ಲದಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಅವುಗಳಿಗೆ ಪರವಾನಗಿ ನೀಡುತ್ತಿರುವುದು ಅರ್ಥವಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಬೀದಿ ದೀಪಗಳ ಸೌಂದರ್ಯ ಹಾಳುಮಾಡುವ ಬ್ಯಾನರ್‌ಗಳನ್ನು ಹರಿದು ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
