ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
07-03-2025
KPSC ಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ !
ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಕೆಪಿಎಸ್‌ಸಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನ್ಯಾಯಾಲಯವೇ ಆರಂಭಿಸಲಿದೆ. ಆಯೋಗದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಲಾಗುವುದು ಎಂದು ಕಿಡಿಕಾರಿದೆ.
ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಳಂಕಿತರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನಿರಾಕರಿಸಿರುವ ಕ್ರಮ ಪ್ರಶ್ನಿಸಿ ಎಇಇ ವಿಶ್ವಾಸ್ ಮತ್ತಿತರ ಎಂಜಿನಿಯರ್‌ಗಳು ಸಲ್ಲಿಸಿರುವ ಮೇಲ್ಮನವಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಕೆಪಿಎಸ್‌ಸಿಗೆ ಚಾಟಿ ಬೀಸಿತು.
ದೊಡ್ಡ ಕುಳಗಳ ಕೈವಾಡವಿಲ್ಲದೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಆಯೋಗದ ಯಾವ್ಯಾವ ಸದಸ್ಯರು, ಸಿಬ್ಬಂದಿ ಮೇಲೆ ಎಷ್ಟು ಕ್ರಿಮಿನಲ್ ಕೇಸುಗಳು ಬಾಕಿಯಿವೆ. ಅವುಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ಒದಗಿಸುವಂತೆ ರಾಜ್ಯ ಅಡ್ವೋಕೇಟ್ ಜನರಲ್‌ಗೆ ಸೂಚಿಸಿತು.
