ವರದಿಗಾರರು :
ಹುಲಗಪ್ಪ ಎಂ. ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
27-10-2025
ಹಿಂಗಾರು ಹಂಗಾಮಿಗೆ ನೀರಾವರಿ ಒತ್ತಾಯ — ನವೆಂಬರ್ 4ರಂದು ಐಸಿಸಿ ಸಭೆ
ಶಹಾಪುರ: ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದ ಹಿಂಗಾರು ಹಂಗಾಮಿನ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 4ರಂದು ಐಸಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ, ಶಾಸಕರಾದ ಚನ್ನಾರೆಡ್ಡಿ ತುನ್ನೂರು (ಯಾದಗಿರಿ), ಶರಣುಗೌಡ ಕಂದಕೂರು (ಗುರುಮಿಠಕಲ್), ರಾಜ ವೇಣುಗೋಪಾಲ ನಾಯಕ (ಸುರುಪುರ) ಹಾಗೂ ಅಜಯ್ ಸಿಂಗ್ (ಜೇವರ್ಗಿ) ಅವರು ಭಾಗವಹಿಸಿ, ಏಪ್ರಿಲ್ 10ರವರೆಗೆ ಎಡದಂಡೆ ಕಾಲುವೆಗೆ ನಿರಂತರವಾಗಿ ನೀರು ಹರಿಸುವಂತೆ ಐಸಿಸಿ ಅಧ್ಯಕ್ಷ ಹಾಗೂ ಸಚಿವ ಆರ್.ಬಿ. ತಿಮ್ಮಾಪುರ ಅವರ ಗಮನಕ್ಕೆ ತರಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮುಂಗಾರು ಹಂಗಾಮಿನ ವೇಳೆ ಹತ್ತಿ, ತೊಗರಿ ಮುಂತಾದ ಪ್ರಮುಖ ಬೆಳೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. ಸರಕಾರದಿಂದ ಸಮೀಕ್ಷೆ ನಡೆದಿದ್ದರೂ, ಖರ್ಚು ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ನೀರಾವರಿ ಅತ್ಯಗತ್ಯವಾಗಿದೆ. ಕಾಲುವೆಗೆ ನೀರು ಸರಿಯಾಗಿ ಹರಿಸಿದರೆ ಶೇಂಗಾ, ಜೋಳ, ಕಡಲೆ ಮುಂತಾದ ಬೆಳೆಗಳು ಬೆಳೆಯುವ ಸಾಧ್ಯತೆ ಇದೆ ಎಂದು ರೈತರು ಹೇಳಿದ್ದಾರೆ. ಕಳೆದ ವರ್ಷ ಕಾಲುವೆಗೆ 14 ದಿನ ಚಾಲುವು – 10 ದಿನ ಬಂದ್ ಎಂಬ ನೀತಿಯನ್ನು ಅನುಸರಿಸಿದ್ದು, ಇದರ ಪರಿಣಾಮವಾಗಿ ಕೊನೆಯ ಭಾಗದ ರೈತರಿಗೆ ನೀರು ಮುಟ್ಟದೇ ಕಷ್ಟ ಉಂಟಾಯಿತು. ಈ ಬಾರಿ 14 ದಿನ ಚಾಲುವು – 8 ದಿನ ಬಂದ್ ಕ್ರಮವನ್ನು ಅನುಸರಿಸುವಂತೆ ರೈತರು ಆಗ್ರಹಿಸಿದ್ದಾರೆ.
ವಡಗೇರಾ ಭಾಗದ ಅನೇಕ ಕಡೆ ಕಳೆದ ವರ್ಷ ನೀರು ಮುಟ್ಟದೆ ರೈತರು ಸಂಕಷ್ಟ ಅನುಭವಿಸಿದ್ದಾರೆ. ಈ ಬಾರಿಯಾದರೂ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಜಯ ಕರ್ನಾಟಕ ಜನಪರ ವೇದಿಕೆ ಯುವ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಆಲ್ದಾಳ ಅವರು ಮನವಿ ಮಾಡಿದರು.
