ವರದಿಗಾರರು :
ಎಂ. ಬಿ. ಮನಗೂಳಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
03-11-2025
ಬಸವನಬಾಗೇವಾಡಿಯಲ್ಲಿ ರಾಜ್ಯೋತ್ಸವ ಭಾವೈಕ್ಯ ಮೆರವಣಿಗೆ ಹಾಗೂ ಸಮಾರಂಭ
ಬಸವನಬಾಗೇವಾಡಿ, ವಿಜಯಪುರ: ತಾಲೂಕು ಕೇಂದ್ರವಾದ ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ವಿವಿಧ ಬಾವುಟ, ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು.
ಅನಂತರ ಅಲ್ಲೇ ವೇದಿಕೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರ್ಕಾರ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ ಸಂಯುಕ್ತ ಆಶ್ರಯದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಮಲ್ಲಿಕಾರ್ಜುನ ರಾಜನಾಳ ಮಾತನಾಡಿ —
“ಅಂತರಾಷ್ಟ್ರೀಯ ಆಂಗ್ಲ ಮತ್ತು ರಾಷ್ಟ್ರೀಯ ಹಿಂದಿ ಭಾಷೆಗಳು ತಮ್ಮದೇ ಲಿಪಿಗಳನ್ನು ಬಳಸಿಕೊಂಡಿವೆ. ನಮ್ಮ ಕನ್ನಡ ಭಾಷೆ ಮಾತ್ರ ವಿಶಿಷ್ಟ ಲಿಪಿಯನ್ನು ಹೊಂದಿದ್ದು, ವಿನೋಬಾ ಭಾವೆಯವರು ಅದನ್ನು ‘ಲಿಪಿಗಳ ರಾಣಿ’ ಎಂದು ಕರೆದಿದ್ದಾರೆ,” ಎಂದು ಹೇಳಿದರು. ಅವರು ಮುಂದೆ ಹೇಳಿದರು — “1799ರಲ್ಲಿ ಕರ್ನಾಟಕವನ್ನು ನಾಲ್ಕು ಭಾಗಗಳಾಗಿ ಹಾಗೂ ಕನ್ನಡ ಮಾತನಾಡುವ ಪ್ರದೇಶಗಳನ್ನು ಸುಮಾರು 20 ಭಾಗಗಳಾಗಿ ಹಂಚಲಾಗಿತ್ತು. ಈ ವಿಭಜಿತ ಕನ್ನಡನಾಡನ್ನು ಒಂದಾಗಿಸಲು ಆಲೂರು ವೆಂಕಟರಾಯರು ಸೇರಿದಂತೆ ಸಾವಿರಾರು ಕನ್ನಡ ಹೋರಾಟಗಾರರು ತ್ಯಾಗಮಾಡಿದರು. ಅವರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣ ಸಾಧ್ಯವಾಯಿತು. ಈ ಏಕೀಕರಣವನ್ನು ಕಾಪಾಡಿಕೊಳ್ಳುವುದು ಮತ್ತು ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ,” ಎಂದರು.
ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ —
“ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು,” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಿದ್ಲಿಂಗ ಮಹಾಸ್ವಾಮಿಗಳು, ವೈ. ಎಸ್. ಸೋಮನಕಟ್ಟಿ, ಜಗದೇವಿ ಗುಂಡಳ್ಳಿ, ಶಿಲ್ಪಾ ಹಿರೇಮಠ, ಪ್ರಕಾಶ್ ದೇಸಾಯಿ, ವಿದ್ಯಾಧರ ಕಲಾದಗಿ, ಸುನಿಲ್ ನಾಯಕ್, ಶಿವಾನಂದ ಡೋಣೂರ್ ಸೇರಿದಂತೆ ಹಲವು ಸಂಘಟನಾ ಮುಖಂಡರು, ಸರ್ಕಾರಿ ಅಧಿಕಾರಿಗಳು, ಊರಿನ ಗಣ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
