ವರದಿಗಾರರು :
ಹುಲಗಪ್ಪ ಎಂ. ಹವಾಲ್ದಾರ, ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
03-11-2025
ಧ್ವಜಾರೋಹಣ ಮಾಡಿ ಶಾಲೆ ಬೀಗ ಹಾಕಿದ ಶಿಕ್ಷಕ – ಸಾಯಂಕಾಲ ಧ್ವಜ ಇಳಿಸದೇ ಸಾರ್ವಜನಿಕರ ಆಕ್ರೋಶ
ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿ ಹೋಬಳಿಯ ಕಿರದಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಕಟ್ಟಿಮಣಿ ಅವರು ನವೆಂಬರ್ 1ರಂದು ನಡೆದ ಕರ್ನಾಟಕ ರಾಜ್ಯೋತ್ಸವದಂದು ನಿರ್ಲಕ್ಷ್ಯ ತೋರಿದ್ದಾರೆಯೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಮಾಹಿತಿಯ ಪ್ರಕಾರ, ರಾಜ್ಯೋತ್ಸವದಂದು ಬೆಳಿಗ್ಗೆ 6:40 ಗಂಟೆಗೆ ಮುಖ್ಯಶಿಕ್ಷಕರು 8 ಮಂದಿ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದರು. ಆದರೆ, ತಾಂಡಾದ ಪಾಲಕರಿಗೆ ಕಾರ್ಯಕ್ರಮದ ಮಾಹಿತಿ ನೀಡದೆ ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ತೆರಳಿದ್ದಾರೆ ಎನ್ನಲಾಗಿದೆ.
ಸಾಯಂಕಾಲ 5:42 ಗಂಟೆಯಾದರೂ ಧ್ವಜವನ್ನು ಇಳಿಸದೆ ಬಿಟ್ಟಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಇದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಧ್ವಜ ಇಳಿಸದಂತಹ ನಿರ್ಲಕ್ಷ್ಯ ಶಿಕ್ಷಕರಿಂದ ನಡೆಯುವುದು ಖಂಡನೀಯ. ಅವರು ಯಾರಿಗೆ ಧ್ವಜ ಇಳಿಸಲು ಸೂಚನೆ ನೀಡಿದ್ದಾರೆ ಎಂಬುದನ್ನು ಮೇಲಧಿಕಾರಿಗಳು ವಿಚಾರಿಸಬೇಕು,” ಎಂದು ತಾಂಡಾದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ, ಸಂಬಂಧಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
