ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
23-03-2025
ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ: ಏರ್ ಇಂಡಿಯಾ ವಿರುದ್ಧ ಡೇವಿಡ್ ವಾರ್ನರ್ ಗರಂ!
ನವದೆಹಲಿ: ಏರ್ ಇಂಡಿಯಾ ವಿಮಾನ ವಿಳಂಬವಾಗಿದ್ದಕ್ಕೆ ಆಸ್ಟ್ರೇಲಿಯಾ ಮಾಜಿ ಸ್ಟಾರ್ ಕ್ರಿಕೆಟರ್ ಡೇವಿಡ್ ವಾರ್ನರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʻʻನಾವು ಪೈಲಟ್‌ಗಳಿಲ್ಲದ ಏರ್ ಇಂಡಿಯಾ ವಿಮಾನ ಹತ್ತಿದ್ದೇವೆ. ಗಂಟೆಗಟ್ಟಲೆ ವಿಮಾನದಲ್ಲಿ ಕಾಯುತ್ತಿದ್ದೇವೆ. ಪೈಲಟ್‌ಗಳಿಲ್ಲದ ವಿಮಾನಕ್ಕೆ ನೀವು ಏಕೆ ಪ್ರಯಾಣಿಕರನ್ನು ಹತ್ತಿಸುತ್ತೀರಿ?ʼ ಅಂತ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, ಬೆಂಗಳೂರು ಏರ್‌ಪೋರ್ಟ್‌ನಿಂದ ಹವಾಮಾನ ಸಂಬಂಧಿತ ಅಡಚಣೆಗಳಿಂದಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳ ಮಾರ್ಗ ಬದಲಾವಣೆ ಮತ್ತು ಕೆಲ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಹೀಗಾಗಿ ನಿಮ್ಮ ವಿಮಾನ ನಿರ್ವಹಿಸುವ ಸಿಬ್ಬಂದಿಯನ್ನ ತಡೆಯಹಿಡಿಯಲಾಗಿದ್ದು, ವಿಳಂಬಕ್ಕೆ ಕಾರಣವಾಗಿದೆ.. ನಿಮ್ಮ ತಾಳ್ಮೆಯನ್ನು ಪ್ರಸಂಶಿಸುತ್ತೇವೆ, ನಮ್ಮ ವಿಮಾನ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.
ಡೇವಿಡ್ ವಾರ್ನರ್ ಅವರು ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಮರುಪಾವತಿ ಲಭ್ಯವಿಲ್ಲದ ಟಿಕೆಟ್ ಬುಕ್ ಮಾಡಿದ ಕಾರಣ ಟ್ರಾವೆಲ್ ಏಜೆಂಟ್ ಟಿಕೆಟ್ ಹಣ ವಾಪಸ್ ನೀಡಲು ನಿರಾಕರಿಸಿದ್ದಾರೆ ಎಂದು ಸಹ ವರದಿಗಳು ತಿಳಿಸಿವೆ.
ಕಳೆದ ಫೆಬ್ರವರಿಯಲ್ಲಿ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮುರಿದ ಸೀಟನ್ನು ನೀಡಿದ್ದಕ್ಕೆ ಏರ್ ಇಂಡಿಯಾ ವಿರುದ್ಧ ಕಿಡಿ ಕಾರಿದ್ದರು. ಇತ್ತೀಚೆಗೆ ಭಾರತೀಯ-ಕೆನಡಾದ ನಟಿ ಲೀಸಾ ರೇ ಸಹ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಏರ್ ಇಂಡಿಯಾವನ್ನು ಟೀಕಿಸಿದ್ದರು.
