ವರದಿಗಾರರು :
ಕೊಟ್ರಪ್ಪ ಹೆಚ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
28-10-2025
ಅಭಿವೃದ್ಧಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ.
ಸರ್ಕಾರದ ಹೊಸ ಆದೇಶ: ಗ್ರಾಮ ಪಂಚಾಯತಿಗೆ ಬಡಾವಣೆ ಅಭಿವೃದ್ಧಿ ಅನುಮೋದನೆ ಅಧಿಕಾರ ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬಡಾವಣೆ ನಿರ್ಮಿಸಲು ಮುಂದಾಗಿರುವ ಅಭಿವೃದ್ಧಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಭೂಪರಿವರ್ತನೆಗೊಂಡ ಜಮೀನಿನಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಇದೀಗ ಗ್ರಾಮ ಪಂಚಾಯತಿಗಳಿಗೇ ಅನುಮೋದನೆ ನೀಡುವ ಅಧಿಕಾರ ಸರ್ಕಾರ ನೀಡಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕೃತ ಸುತೋಲೆ ಹೊರಡಿಸಿದೆ.
ಭೂಪರಿವರ್ತನೆಗೊಂಡ ಜಮೀನುಗಳಿಗೆ ಮಾತ್ರ ಅನ್ವಯ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ, ಭೂಪರಿವರ್ತನೆಗೊಂಡ ಜಮೀನುಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಬಡಾವಣೆಯ ನಿವೇಶನ ಖಾತೆ ತೆರೆಯುವ ಅಧಿಕಾರವೂ ಈಗ ಗ್ರಾಮ ಪಂಚಾಯತಿಗೆ ಸಿಕ್ಕಿದೆ. ಆದರೆ ಭೂಪರಿವರ್ತನೆ ಇಲ್ಲದ ಜಮೀನುಗಳಲ್ಲಿ ಅಭಿವೃದ್ಧಿಪಡಿಸಿದ ಬಡಾವಣೆಗಳಿಗೆ ಇದು ಅನ್ವಯವಾಗುವುದಿಲ್ಲ.
ಅನುಮೋದನೆಗೆ ಅಗತ್ಯ ದಾಖಲೆಗಳು ಬಡಾವಣೆ ಅಭಿವೃದ್ಧಿಗೆ ಮೊದಲು ಜಮೀನಿನ ಮಾಲೀಕರು ವಿನ್ಯಾಸ ರಚಿಸಿ, ರಸ್ತೆಗಳು, ಉದ್ಯಾನ, ಚರಂಡಿ, ನೀರಿನ ಮಾರ್ಗ, ವಿದ್ಯುತ್ ಸಂಪರ್ಕ ಇತ್ಯಾದಿಗಳಿಗೆ ಸಂಬಂಧಿಸಿದ ಇಲಾಖೆಗಳ ನಿರಾಕ್ಷೇಪಣಾ ಪತ್ರಗಳನ್ನು ಪಡೆದು ಅರ್ಜಿಯನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು.
ಸಾರ್ವಜನಿಕ ಸೌಲಭ್ಯಗಳ ಹಸ್ತಾಂತರ ಅಭಿವೃದ್ಧಿಯ ನಂತರ ಬಡಾವಣೆಯಲ್ಲಿನ ಸಾರ್ವಜನಿಕ ರಸ್ತೆ, ಉದ್ಯಾನ, ಒಳಚರಂಡಿ, ತ್ಯಾಜ್ಯ ನೀರು ಘಟಕಗಳ ಹಕ್ಕುಗಳನ್ನು ಗ್ರಾಮ ಪಂಚಾಯತಿಗೆ ಬಿಟ್ಟುಕೊಡಬೇಕು. ಅವುಗಳ ನಿರ್ವಹಣೆ ಮುಂದಿನ ದಿನಗಳಲ್ಲಿ ಪಂಚಾಯತಿಯದ್ದಾಗಿರಲಿದೆ.
ಅಡಮಾನ ನಿಯಮ ಮತ್ತು ಖಾತರಿ ಬಡಾವಣೆಯ ಕೆಲವು ನಿವೇಶನಗಳನ್ನು ಅಡಮಾನವಾಗಿ ಪಂಚಾಯತಿಗೆ ಒಪ್ಪಿಸಿ, ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಪೂರ್ಣಗೊಂಡ ಬಳಿಕ ಅವುಗಳನ್ನು ಹಿಂತಿರುಗಿಸಿಕೊಳ್ಳಬಹುದು. ಮೂಲಭೂತ ಸೌಕರ್ಯಗಳಿಗೆ ಖಾತರಿ ನೀಡಲು ಅಭಿವೃದ್ಧಿದಾರರು ಒಟ್ಟು ವೆಚ್ಚದ ಶೇ 10 ರಷ್ಟು ಮೊತ್ತವನ್ನು ಬ್ಯಾಂಕ್ ಭದ್ರತೆ ರೂಪದಲ್ಲಿ ಒಂದು ವರ್ಷಕ್ಕೆ ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗದಲ್ಲಿ ಇಡಬೇಕು.
ಇತರೆ ಪ್ರಮುಖ ನಿಯಮಗಳು
ಎಲ್ಲಾ ವಿನ್ಯಾಸಗಳಿಗೆ ಸಂಬಂಧಿತ ಇಲಾಖೆಗಳ ನಿರಾಕ್ಷೇಪಣಾ ಪತ್ರ ಕಡ್ಡಾಯ ಅಭಿವೃದ್ಧಿಯ ಸಮಯದಲ್ಲಿ ಶೇ 5 ರಿಂದ 10 ರವರೆಗೆ ಮೇಲ್ವಿಚಾರಣಾ ಶುಲ್ಕ ಪಾವತಿ ಸಾರ್ವಜನಿಕ ಪ್ರದೇಶಗಳು, ನಾಗರಿಕ ಬಳಕೆ ನಿವೇಶನಗಳು ಪಂಚಾಯತಿಗೆ ಹಸ್ತಾಂತರ ಕಡ್ಡಾಯ
