ವರದಿಗಾರರು :
ಎಂ.ಡಿ.ಗೌಸ್* ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
15-10-2025
ಕುಕನೂರು ಪೊಲೀಸ್ ಠಾಣೆಯಲ್ಲಿ ದಲಿತ ಮುಖಂಡನ ಮೇಲೆ PSI ಹಲ್ಲೆ – ಅಧಿಕಾರಿಯ ಅಮಾನತು
ಗಂಡ-ಹೆಂಡತಿ ಜಗಳ ಬಗೆಹರಿಸಲು ಬಂದ ದಂಪತಿಯ ವಿವಾದ ಪೊಲೀಸ್ ಠಾಣೆಯೊಳಗೆ ನಾಟಕೀಯ ತಿರುವು ಪಡೆದಿದೆ. ಕುಕನೂರು ಠಾಣೆಯ ಪಿಎಸ್‌ಐ ಗುರುರಾಜ ಅವರು ಸಂಯಮ ಕಳೆದುಕೊಂಡು ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ (ಅ.14) ಮಧ್ಯಾಹ್ನ ಸಂಭವಿಸಿದೆ.
ತಳಕಲ್ ಗ್ರಾಮದ ದಂಪತಿಯ ಜಗಳ ಪರಿಹರಿಸಲು ಠಾಣೆಗೆ ಬಂದಿದ್ದ ಯಲಮಗೇರಿ ಗ್ರಾಮದ ದಲಿತ ಮುಖಂಡ ಗಾಳೆಪ್ಪ ಹಿರೇಮನಿ ಅವರು ವಿಷಯವನ್ನು ಪಿಎಸ್‌ಐ ಮುಂದೆ ವಿವರಿಸಿ, "ದಂಪತಿಯನ್ನು ಸಮಾಧಾನಪಡಿಸಿ ಕಳಿಸಿ" ಎಂದು ಮನವಿ ಮಾಡಿದಾಗ, ಪಿಎಸ್‌ಐ ಗುರುರಾಜ ಅವರು ಆಕ್ರೋಶಗೊಂಡು “ನನಗೆ ಯಾರಿಂದಲೂ ಕೆಲಸ ಕಲಿಯುವ ಅಗತ್ಯವಿಲ್ಲ, ನೀವೆಲ್ಲ ಐದು ನೂರು ರೂಪಾಯಿಯ ಮಂದಿ” ಎಂದು ಅವಾಚ್ಯಪದಗಳಿಂದ ನಿಂದಸಿದ್ದಾರೆ.
ಇದಕ್ಕೆ ಆಕ್ರೋಶಗೊಂಡ ಹಿರೇಮನಿ ಅವರು ಪ್ರಶ್ನೆ ಮಾಡಿದಾಗ ಪಿಎಸ್‌ಐ ಗುರುರಾಜ ಅವರು ದಲಿತ ಮುಖಂಡನ ಮೇಲೆ ನೇರವಾಗಿ ಹಲ್ಲೆ ನಡೆಸಿದ್ದಾರೆ.
ಈ ದೃಶ್ಯಗಳು ಠಾಣೆಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಕೊಪ್ಪಳ ಜಿಲ್ಲೆಯ ದಲಿತ ಮುಖಂಡ ಮಲ್ಲು ಪೂಜಾರ ಸೇರಿದಂತೆ ಅನೇಕರು ಠಾಣೆ ಎದುರು ಪ್ರತಿಭಟನೆಗೆ ಕುಳಿತರು. ಸ್ಥಳಕ್ಕೆ ಸಿಪಿಐ ಮೌನೇಶ್ವರ ಪಾಟೀಲ್ ಹಾಗೂ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. “ಪಿಎಸ್‌ಐ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ಅಥವಾ ಅಮಾನತು ಆದೇಶ ಹೊರಡಿಸುವವರೆಗೆ ಹೋರಾಟ ಮುಂದುವರೆಯುತ್ತದೆ" ಎಂದು ಮುಖಂಡರು ಘೋಷಿಸಿದರು.
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್. ಅರಸಿದ್ಧಿ ಹಾಗೂ ಹೆಚ್ಚುವರಿ ಎಸ್.ಪಿ ಹೇಮಂತಕುಮಾರ್ ಸ್ಥಳಕ್ಕೆ ಧಾವಿಸಿ ಸಮಾಲೋಚನೆ ನಡೆಸಿದರು. ನಂತರ ಬಳ್ಳಾರಿ ವಲಯದ ಐ.ಜಿ.ಪಿ ವರ್ತಿಕಾ ಕಟಿಯಾರ್ ದೂರವಾಣಿ ಮೂಲಕ ಎಸ್‌ಪಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಪಿಎಸ್‌ಐ ಗುರುರಾಜ ಅವರನ್ನು ತಕ್ಷಣವೇ ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ.
ಈ ಘಟನೆಯು ಪೊಲೀಸರ ವರ್ತನೆ ಮತ್ತು ಠಾಣೆಯ ಒಳಗಿನ ಶಿಸ್ತು ಕುರಿತು ಮತ್ತೆ ಪ್ರಶ್ನೆ ಹುಟ್ಟಿಸಿದೆ. ದಲಿತ ಸಂಘಟನೆಗಳು ಪಿಎಸ್‌ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ.*
