ವರದಿಗಾರರು :
ಡಾ . ಜ್ಯೋತಿ ||
ಸ್ಥಳ :
ತಿಪಟೂರು
ವರದಿ ದಿನಾಂಕ :
27-10-2025
ತಿಪಟೂರು: ರಸ್ತೆ ಗುಂಡಿಗಳಿಂದ ಜನತೆ ತತ್ತರ
ತಿಪಟೂರು ನಗರಕ್ಕೆ ಹಾಸನ, ಅರಸೀಕೆರೆ, ಬೆಂಗಳೂರು, ಹುಳಿಯಾರು ಹಾಗೂ ತುರುವೇಕೆರೆ ದಿಕ್ಕಿನಿಂದ ಪ್ರವೇಶಿಸಲು ಸಾಧ್ಯವಾದರೂ, ಈ ಮಾರ್ಗಗಳಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟಕರವಾಗಿದೆ. ಹಾಲ್ಕುರಿಕೆ ರಸ್ತೆಯ ಗೋವಿನಪುರ, ಅಣ್ಣಾಪುರ ಭಾಗಗಳಲ್ಲಿ ರಸ್ತೆ ಗುಂಡಿಗಳು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿವೆ. ತುರುವೇಕೆರೆ ದಿಕ್ಕಿನಿಂದ ಬರುವ ವಾಹನಗಳಿಗೆ ರೈಲ್ವೆ ಮಾರ್ಗದ ಬಳಿ ಗುಂಡಿಗಳ ಸಾಲು “ವೆಲ್ಕಂ” ಹೇಳುತ್ತವೆ. ರಾತ್ರಿ ವೇಳೆಯಲ್ಲಿ ಗುಂಡಿಯಲ್ಲಿ ನೀರು ನಿಂತು ಅಪಘಾತಗಳಿಗೆ ಕಾರಣವಾಗುತ್ತಿದೆ. ಬೆಂಗಳೂರು ದಿಕ್ಕಿನಿಂದ ಬರುವಾಗ ಕೋಡಿ ವೃತ್ತದಿಂದಲೇ ರಸ್ತೆ ಹಾಳಾಗಿದೆ. ಯುಜಿಡಿ ಹಾಗೂ ಮಳೆನೀರು ಸೇರಿ ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ.
ಹಾಸನ ರಸ್ತೆಯ ಚೆಂದನೇಹಳ್ಳಿ ಗಡಿಯವರೆಗೂ ಆಳವಾದ ಗುಂಡಿಗಳು ಇದ್ದು, ಹಲವು ಅಪಘಾತಗಳು ಸಂಭವಿಸಿವೆ. ಗ್ರಾಮಾಂತರ ಪ್ರದೇಶಗಳಾದ ಬೋಚಿಹಳ್ಳಿ, ಮತ್ತಿಘಟ್ಟ, ಬಳವವೇರಲು, ಹೊಸೂರು, ವಿಘ್ನಸಂತೆ, ಹಾಲ್ಕುರಿಕೆ-ಬೈರಾಪುರ, ಹಾಲೇನಹಳ್ಳಿ ತಿರುವುಗಳಲ್ಲಿ ಸಹ ಇದೇ ಸ್ಥಿತಿ ಇದೆ. ಬೊಮ್ಮಾಲಾಪುರ, ನಾಗತೀಹಳ್ಳಿ, ಮಾರಗೊಂಡನಹಳ್ಳಿ, ಕರೀಕೆರೆ, ಕೊನೇಹಳ್ಳಿ, ಬಿಳಿಗೆರೆ ಪಾಳ್ಯ, ಕಿಬ್ಬನಹಳ್ಳಿ, ಕಲ್ಲುಶೆಟ್ಟಿಹಳ್ಳಿ, ಕೊಂಡ್ಲಘಟ್ಟ ರಸ್ತೆಗಳಲ್ಲಿಯೂ ಗುಂಡಿಗಳ ಸರಪಳಿ ಕಂಡುಬರುತ್ತಿದೆ.
ಅಧಿಕಾರಿಗಳು ದಿನವೂ ಈ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿದ್ದರೂ ರಸ್ತೆ ಸ್ಥಿತಿ ಸುಧಾರಣೆ ಆಗದಿರುವುದು ನಾಗರಿಕರಲ್ಲಿ ಅಸಮಾಧಾನ ಉಂಟುಮಾಡಿದೆ. ಸ್ಥಳೀಯ ಶಾಸಕರು ತಾವು ಸ್ವತಃ ಈ ಮಾರ್ಗಗಳಲ್ಲಿ ಸಂಚರಿಸಿ ಜನರ ಕಷ್ಟ ಅರಿಯಲಿ ಎಂಬುದು ಸಾರ್ವಜನಿಕರ ಆಗ್ರಹ.
