ವರದಿಗಾರರು :
ಶರಣಬಸಪ್ಪ ||
ಸ್ಥಳ :
ಗಂಗಾವತಿ
ವರದಿ ದಿನಾಂಕ :
29-10-2025
ಗಂಗಾವತಿ ನಗರದಲ್ಲಿ ರಸ್ತೆಯ ಡಿವೈಡರ್ ಸರಿಪಡಿಸುವಂತೆ ಮ್ಯಾಗಳಮನಿ ಒತ್ತಾಯ
ಗಂಗಾವತಿ, ಅ.28: ಗಂಗಾವತಿ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ಅವೈಜ್ಞಾನಿಕ ರೀತಿಯಲ್ಲಿ ಡಿವೈಡರ್ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ, ಅದನ್ನು ಸರಿಪಡಿಸುವಂತೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಕೆಆರ್‌ಡಿಎಲ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಕನಕದಾಸ ಸರ್ಕಲ್‌ನಿಂದ ನೀಲಕಂಠೇಶ್ವರ ಸರ್ಕಲ್‌ವರೆಗೆ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದ್ದು, ಅಗಲದ ಅಳತೆ ಎಲ್ಲೆಡೆ ಒಂದೇ ರೀತಿಯಾಗಿ ಪಾಲನೆಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಜನಸಂದಣಿ ಅಧಿಕವಾಗಿರುವ ನಗರದಲ್ಲಿ ಪ್ರಭಾವಿಗಳ ಒತ್ತಡದ ಅಡಿಯಲ್ಲಿ ಕಾಮಗಾರಿ ಅಸಮರ್ಪಕವಾಗಿ ನಡೆಯುತ್ತಿದೆ ಎಂದೂ ಮ್ಯಾಗಳಮನಿ ಆರೋಪಿಸಿದರು. “ಡಿವೈಡರ್ ಅನ್ನು ಎರಡು ಫೀಟ್ ಅಗಲದಲ್ಲಿ ನಿರ್ಮಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕೇವಲ ಒಂದು ಫೀಟ್ ಅಗಲದ ಡಿವೈಡರ್ ಮಾಡಿದರೆ ಸಾಕಾಗುತ್ತದೆ,” ಎಂದು ಅವರು ಸಲಹೆ ನೀಡಿದರು.
