ವರದಿಗಾರರು :
ಕೆ.ಪಿ. ರಾವ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
30-10-2025
ಕೃತಕ ಬುದ್ಧಿಮತ್ತೆ ಎಚ್ಚರಿಕೆಯಿಂದ ಬಳಕೆ ಅಗತ್ಯ: ಪ್ರೊ. ಕೆ.ಪಿ. ರಾವ್
ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರೊ. ಕಮಲಾ ಹಂಪನಾ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಕೃತಕ ಬುದ್ಧಿಮತ್ತೆ ಮತ್ತು ಸಾಹಿತ್ಯ” ವಿಷಯದ ಕುರಿತು ಮಾತನಾಡಿದರು.
“ತಂತ್ರಜ್ಞಾನ ಕತ್ತಿಯ ಅಲಗೆಯಂತಿದೆ; ಅದು ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಉಪಯೋಗವಾಗಬಹುದು. ನಾವು ಅದರ ಧನಾತ್ಮಕ ಅಂಶವನ್ನು ಗಮನಿಸಬೇಕು. ಕೃತಕ ಬುದ್ಧಿಮತ್ತೆ ಮಾನವ ಜನಾಂಗದ ಉನ್ನತಿಗಾಗಿ ಉಪಯೋಗವಾಗಬೇಕು, ಅವನತಿಗಾಗಿ ಅಲ್ಲ ಎಂಬುದನ್ನು ಅರಿಯಬೇಕು,” ಎಂದು ಅವರು ಸಲಹೆ ನೀಡಿದರು.
ಇಂಗ್ಲಿಷ್ ಭಾಷೆಯಲ್ಲಿ ಎ.ಐ. ಕುರಿತ ಸಂಶೋಧನೆಗಳು ಸಾಕಷ್ಟು ನಡೆದಿದ್ದರೂ, ಕನ್ನಡ ಸೇರಿದಂತೆ ಭಾರತದ ಇತರೆ ಭಾಷೆಗಳಲ್ಲಿ ಅದು ತೃಪ್ತಿಕರವಾಗಿಲ್ಲ. “ಈ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನಗಳು ನಡೆಯಬೇಕು,” ಎಂದು ಅವರು ಅಭಿಪ್ರಾಯಪಟ್ಟರು.
“ಶಾಂತ ಪರಿಸ್ಥಿತಿಯಲ್ಲಿ ಹೊಸ ಅನ್ವೇಷಣೆಗಳು ಆಗುವುದಿಲ್ಲ; ಸಂಘರ್ಷದಿಂದಲೇ ಹೊಸ ಆವಿಷ್ಕಾರಗಳು ಸಾಧ್ಯ. ಮನುಷ್ಯನಿಗೆ ಅಂಥಾ ಸಂಘರ್ಷ ಅಗತ್ಯ, ಆದರೆ ಕಂಪ್ಯೂಟರ್‌ಗೆ ಅಂತಹ ಅಡಚಣೆಗಳಿಲ್ಲ,” ಎಂದು ಪ್ರೊ. ರಾವ್ ಹೇಳಿದರು.
ಸಾಹಿತಿ ಪ್ರೊ. ಹಂ.ಪ. ನಾಗರಾಜಯ್ಯ ಅವರು “ಭಾಷೆ ಇಲ್ಲದೆ ಜಗತ್ತು ಕತ್ತಲಲ್ಲಿ ಇರುತ್ತಿತ್ತು. ಭಾಷೆ ಎಲ್ಲ ಜ್ಞಾನಕ್ಕೂ ಮೂಲ. ನೆನಪಿಗಿಂತ ಮರೆವು ದೊಡ್ಡದು, ಆದರೆ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ವಿಸ್ಮೃತಿಗೆ ಜಾರಬಾರದು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸಂಯೋಜಕಿ ಗೀತಾ ವಸಂತ, ಪ್ರಾಧ್ಯಾಪಕರಾದ ನಿತ್ಯಾನಂದ ಬಿ. ಶೆಟ್ಟಿ ಮತ್ತು ಅಣ್ಣಮ್ಮ ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
