ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
20-10-2025
ತುಮಕೂರು: ಆರ್‌ಎಸ್‌ಎಸ್ ಶತಮಾನೋತ್ಸವ ಪಥ ಸಂಚಲನ ಭವ್ಯವಾಗಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ತುಮಕೂರು ನಗರದಲ್ಲಿ ಭವ್ಯ ಪಥ ಸಂಚಲನ ನಡೆಯಿತು. ನಗರದ ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾದ ಸಂಚಲನದಲ್ಲಿ ಸಾವಿರಾರು ಮಂದಿ ಗಣವೇಷಧಾರಿಗಳು ಭಾಗವಹಿಸಿದರು. ಕರಿ ಟೋಪಿ, ಖಾಕಿ ಪ್ಯಾಂಟ್, ಬಿಳಿ ಅಂಗಿ ಧರಿಸಿ, ಕೈಯಲ್ಲಿ ದೊಣ್ಣೆ ಹಿಡಿದು ಶಿಸ್ತಿನ ಹೆಜ್ಜೆ ಹಾಕಿದರು. ಜಿಲ್ಲಾ ಪ್ರಮುಖ ನಾಗೇಂದ್ರಪ್ರಸಾದ್ ನೇತೃತ್ವದಲ್ಲಿ ಎರಡು ತಂಡಗಳು ಪ್ರತ್ಯೇಕ ಮಾರ್ಗಗಳಿಂದ ಪಥ ಸಂಚಲನ ನಡೆಸಿ, ಗುಂಚಿ ವೃತ್ತದಲ್ಲಿ ಸೇರಿಕೊಂಡವು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಪುಷ್ಪಾರ್ಚನೆ ನೆರವೇರಿಸಿದರು. ನಂತರ ಎಂ.ಜಿ.ರಸ್ತೆಯಲ್ಲಿ ನಡೆದ ಸಂಚಲನದ ವೇಳೆ ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿ ಸುರಿಸಲಾಯಿತು. ಶಾಸಕರು ಬಿ. ಸುರೇಶ್‌ಗೌಡ, ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹಾಗೂ ಹಲವರು ಭಾಗವಹಿಸಿದ್ದರು.
