ವರದಿಗಾರರು :
ಅಜಯ್ ||
ಸ್ಥಳ :
ರಾಯಚೂರು
ವರದಿ ದಿನಾಂಕ :
02-11-2025
ಕಿಲ್ಲೇ ಬೃಹನ್ಮಠದಲ್ಲಿ ಧರ್ಮಸಮ್ಮೇಳನ
ಸಂಸ್ಕೃತಿ ಬೆಳೆಸುವುದೇ ಗುರುಪೀಠಗಳ ಧ್ಯೇಯ – ರಂಭಾಪುರಿ ಶ್ರೀಗಳು ರಾಯಚೂರು, ನ.೧ (ವರದಿಗಾರ: ಅಜಯ್ ರಾಯಚೂರು): ಬಾಳೆಗೆ ಗೊನೆಯಿರುವಂತೆ ಬಾಳಿಗು ಗುರಿಯಿರಬೇಕು; ಗುರಿ ತಲುಪಿಸಲು ಗುರು ಅಗತ್ಯ. ಜನರ ಮನಗಳಲ್ಲಿ ಅಡಗಿರುವ ದುಷ್ಟಗುಣಗಳನ್ನು ನಿವಾರಿಸಿ ಸಭ್ಯತೆ ಮತ್ತು ಸಂಸ್ಕೃತಿ ಬೆಳೆಸುವುದೇ ಗುರುಪೀಠಗಳ ಪರಮ ಗುರಿ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಸಾವಿರದೇವರ ಸಂಸ್ಥಾನದ ಕಿಲ್ಲೇ ಬೃಹನ್ಮಠದಲ್ಲಿ ಶುಕ್ರವಾರ ನಡೆದ ಲಿಂ. ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳವರ ಲಿಂಗಾಂಗ ಸಾಮರಸ್ಯದ ೨೫ನೇ ಪುಣ್ಯಸ್ಮರಣೋತ್ಸವ ಧರ್ಮಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀಗಳು ಮುಂದುವರಿದು, “ಜನರ ಭೋಗ ಮತ್ತು ಮೋಕ್ಷಗಳಿಗೆ ಧರ್ಮವೇ ಮೂಲ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣುಗಳು. ಪ್ರಗತಿಪರ ವಿಚಾರಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶವಾಗಬಾರದು. ಲಿಂ. ಶ್ರೀಗುರುಪಾದ ಶಿವಾಚಾರ್ಯರ ಪೂಜಾ-ಧರ್ಮನಿಷ್ಠೆ, ಭಕ್ತರ ಮೇಲಿನ ವಾತ್ಸಲ್ಯ ಮತ್ತು ಸಮಾಜ ಸೇವೆ ಮರೆಯಲಾಗದು,” ಎಂದು ಹೇಳಿದರು. ಅವರು ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಠದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು ಅದನ್ನು ಅದ್ಭುತವಾಗಿ ರೂಪಿಸಿದ್ದು, ಇದು ಶ್ರೀಗುರುಪಾದ ಸ್ವಾಮಿಗಳ ಧ್ಯೇಯದ ಮುಂದುವರಿಕೆಯಾಗಿದೆ ಎಂದು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ‘ಧರ್ಮಗಂಗೋತ್ರಿ’ ಹಾಗೂ ‘ಶ್ರೀ ಶಿವರಂಭಾಪುರೀಶ ಸಭಾಂಗಣ’ ಉದ್ಘಾಟಿಸಲಾಯಿತು.
ಧರ್ಮಪ್ರಜ್ಞೆಯೇ ಶುದ್ಧ ಜೀವನದ ಮೂಲ: ಶರಣ ಭೂಪಾಲ ನಾಡಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಶರಣ ಭೂಪಾಲ ನಾಡಗೌಡ ಅವರು, “ಪರಿಶುದ್ಧ ಮತ್ತು ಪವಿತ್ರ ಜೀವನ ರೂಪುಗೊಳ್ಳಲು ಧರ್ಮಪ್ರಜ್ಞೆ ಅಗತ್ಯ. ತಾಯಿ, ಭೂಮಿ, ಧರ್ಮ — ಈ ಮೂರೂ ಮನುಷ್ಯನ ಜೀವನದ ಅಸ್ತಿತ್ವ,” ಎಂದರು.
ಧರ್ಮ ಶಾಶ್ವತ – ಶಾಂತಮಲ್ಲ ಸ್ವಾಮಿಗಳು ನೇತೃತ್ವ ವಹಿಸಿದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, “ಧರ್ಮ ಯಾವಾಗಲೂ ನಾಶವಾಗದ ಶಕ್ತಿ. ಪ್ರಾಪಂಚಿಕ ಬಾಂಧವ್ಯ ಶಿಥಿಲಗೊಳ್ಳಬಹುದು, ಆದರೆ ಗುರು-ಶಿಷ್ಯರ ಬಾಂಧವ್ಯ ಶಾಶ್ವತ. ಜನಮನ ಜಾಗೃತಿಗೊಳಿಸಲು ಧರ್ಮದ ಬೆಳಕು ಅಗತ್ಯ,” ಎಂದರು.
ಗಣ್ಯರ ಸಾನ್ನಿಧ್ಯ ಈ ಸಮಾರಂಭದಲ್ಲಿ ಗಬ್ಬೂರು ಬೂದಿಬಸವ, ನೀಲುಗಲ್ ಪಂಚಾಕ್ಷರ, ರಾಯಚೂರು ಅಭಿನವ ರಾಚೋಟೇಶ್ವರ, ನವಲಕಲ್ ಅಭಿನವ ಸೋಮನಾಥ, ಸಿಂಧನೂರು ಸೋಮನಾಥ, ಕಡೇಚೂರು ಗುರುಮೂರ್ತಿ, ಛೇಗುಂಟಾ ಡಾ. ಕ್ಷೀರಲಿಂಗ ಶರಣರು ಸೇರಿದಂತೆ ಅನೇಕ ಶಿವಾಚಾರ್ಯರು ಪಾಲ್ಗೊಂಡರು. ಶಾಸಕ ಡಾ. ಎಸ್. ಶಿವರಾಜ ಪಾಟೀಲ ಅವರು, “ಲಿಂ. ಶ್ರೀಗುರುಪಾದ ಸ್ವಾಮಿಗಳು ಧರ್ಮಮುಖಿಯಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದರು. ಶಾಂತಮಲ್ಲ ಸ್ವಾಮಿಗಳು ಅವರ ಮಾರ್ಗದರ್ಶನದಲ್ಲಿ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ,” ಎಂದು ಹೇಳಿದರು. ಶಾಸಕ ದದ್ದಲ ಬಸವನಗೌಡ, ದರೂರ ಬಸವನಗೌಡ, ರಾಮಣ್ಣ ಇರಟಗೇರಾ, ಡಾ. ನಿಜಗುಣ ಶಿವಯೋಗಪ್ಪ ಜವಳಿ, ಅಂತರಗಂಗಿ ವೀರಭದ್ರಪ್ಪ, ಎ.ಎಸ್. ಪಾಟೀಲ, ರಮೇಶ ಅಜಗರಣಿ, ಎಸ್.ಎಲ್. ಕೇಶವರೆಡ್ಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಧಾರ್ಮಿಕ ವೈಭವದೊಂದಿಗೆ ಕಾರ್ಯಕ್ರಮ ಬಾಳೆಹೊನ್ನೂರು ಗುರುಕುಲ ಸಾಧಕರಿಂದ ವೇದಘೋಷ, ಅಮರಯ್ಯಸ್ವಾಮಿ ಹಿರೇಮಠ ರಾಜಲದಿನ್ನಿ ಅವರಿಂದ ಪ್ರಾರ್ಥನೆ, ನಿವೃತ್ತ ಪ್ರಾಧ್ಯಾಪಕ ಡಾ. ಚನ್ನಬಸವಸ್ವಾಮಿ ಅವರಿಂದ ಸ್ವಾಗತ ಹಾಗೂ ಡಾ. ವಿಜಯರಾಜೇಂದ್ರ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ನೇರವೇರಿತು. ಶ್ರೀಮತಿ ಭಾಗ್ಯಲಕ್ಷ್ಮಿ ಗಣದಿನ್ನಿ ಹನುಮನಗೌಡರಿಂದ ಪ್ರಸಾದ ಸೇವೆ ನಡೆಯಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
