ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
15-10-2025
ಬೀದರ್ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾದ ಲೋಕಾಯುಕ್ತ ದಾಳಿ..!
ಜಿಲ್ಲೆಯ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ, ಕೃಷಿ ಇಲಾಖೆಯ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಸಹಾಯಕ ನಿರ್ದೇಶಕ ಧೂಳಪ್ಪ ಹೊಸಾಳೆ ಅವರ ಮನೆ ಹಾಗೂ ಕಚೇರಿ ಮೇಲೆ, ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಅಧಿಕಾರಿಗಳಿಂದ ಅಚ್ಚರಿ ಮೂಡಿಸುವಷ್ಟು ಆಸ್ತಿ ಪತ್ತೆ ಆಗಿದೆ.
ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದಂತೆ — ಧೂಳಪ್ಪ ಅವರ ಬಳಿ ಅಂದಾಜು ೧.೮೨ ಕೋಟಿ ರೂ. ಸ್ಥಿರಾಸ್ತಿ, ಹಾಗೂ ೧.೫೨ ಕೋಟಿ ರೂ. ಚರಾಸ್ತಿ ಪತ್ತೆಯಾಗಿದೆ.
ಮನೆ ಶೋಧ ಸಂದರ್ಭದಲ್ಲಿ, ನಗದು ಎಂಭತ್ತಮೂರು ಲಕ್ಷ ರೂಪಾಯಿ ದೊರೆತಿದೆ. ಒಟ್ಟು ಮೂರು ಕೋಟಿ ತೊಂಬತ್ತೊಂಬತ್ತು ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ವೇಳೆ ಮೂವತ್ತಮೂರು ಎಕರೆ ಕೃಷಿ ಭೂಮಿ, ಎರಡು ನಿವೇಶನಗಳು, ಒಂದು ಮನೆ ಹಾಗೂ ದುಬಾರಿ ವಾಹನಗಳು ಪತ್ತೆಯಾದವು.
ಅಂದಾಜು ಪ್ರಕಾರ, ಧೂಳಪ್ಪ ಹೊಸಾಳೆ ಅವರ ಬಳಿ ಅವರ ಆದಾಯಕ್ಕಿಂತ ೨೭೫ ಪ್ರತಿಶತ ಹೆಚ್ಚು ಆಸ್ತಿ ಇರುವುದನ್ನು ಲೋಕಾಯುಕ್ತ ಪತ್ತೆಹಚ್ಚಿದೆ.
ದಾಳಿ ಬೀದರ್ ಜಿಲ್ಲೆಯ ಗುರುನಗರದಲ್ಲಿನ ಮನೆ, ಭಾಲ್ಕಿ ತಾಲೂಕಿನ ಕರಡಾಳದ ಸ್ವಗ್ರಾಮ, ಕಮಲನಗರ ತಾಲೂಕಿನ ಮುಧೋಳದ ಪತ್ನಿಯ ತವರು ಮನೆ, ಹಾಗೂ ಔರಾದ್ ಪಟ್ಟಣದ ಕಚೇರಿ — ಈ ನಾಲ್ಕು ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಿತು.
ದಾಳಿ ಕಾರ್ಯಾಚರಣೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಹನುಮಂತರಾಯ ಅವರ ನೇತೃತ್ವದಲ್ಲಿ ನಡೆದಿದೆ.
ಧೂಳಪ್ಪ ಹೊಸಾಳೆ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ದೂರು ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ.
