ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
22-10-2025
ಪೊಲೀಸ್ ಸೇವೆ ದೇಶದ ಹೆಮ್ಮೆ – ನ್ಯಾ. ಜಯಂತಕುಮಾರ್
ತುಮಕೂರು: ದೇಶಕ್ಕಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಸೇವೆ ಶ್ಲಾಘನೀಯ ಎಂದು ಜಿಲ್ಲಾ ನ್ಯಾಯಾಧೀಶ ನ್ಯಾ. ಜಯಂತಕುಮಾರ್ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಸ್ಮರಣೋತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
“ಪೊಲೀಸರ ನಿಷ್ಠೆ, ಧೈರ್ಯ, ಸೇವಾಭಾವನೆ ಪ್ರಶಂಸನೀಯ. ಸಮಾಜದ ಶಾಂತಿಯನ್ನು ಕಾಪಾಡಲು ಅವರು ದಿನರಾತ್ರಿ ದುಡಿಯುತ್ತಿದ್ದಾರೆ. ಸೇವೆಯಲ್ಲಿ ಮೃತಪಟ್ಟವರ ತ್ಯಾಗವನ್ನು ದೇಶ ಎಂದಿಗೂ ಮರೆಯದು” ಎಂದರು. ಅವರು ಶ್ರದ್ಧಾಂಜಲಿ ಸಲ್ಲಿಸಿ, ಮೃತ ಪೊಲೀಸರ ಕುಟುಂಬಗಳಿಗೆ ಧೈರ್ಯ ತುಂಬುವಂತೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಬಸವರಾಜು ವಹಿಸಿದ್ದರು.
1959ರ ಅ. 21ರಂದು ದೇಶದ ಗೃಹ ಸಚಿವಾಲಯದ ವತಿಯಿಂದ ಸ್ಮರಣೋತ್ಸವವನ್ನು ಪ್ರಾರಂಭಿಸಲಾಯಿತು. ಅದರ ನಂತರ ಪ್ರತಿವರ್ಷ ಅ. 21ರಂದು ಈ ದಿನವನ್ನು “ಪೊಲೀಸ್ ಶೌರ್ಯ ದಿನ”ವಾಗಿ ಆಚರಿಸಲಾಗುತ್ತಿದೆ. ಸೇವೆಯಲ್ಲಿ ಮೃತಪಟ್ಟ 10 ಪೊಲೀಸರ ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ರಾಜ್ಯಾದ್ಯಂತ 191 ಮಂದಿ ಪೊಲೀಸರು ಕರ್ತವ್ಯನಿರ್ವಹಿಸುತ್ತಾ ಹುತಾತ್ಮರಾದರು ಎಂದು ಅವರು ಸ್ಮರಿಸಿದರು. ಉಪವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು.
