ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
10-11-2025
ಜಿಲ್ಲೆಯಲ್ಲಿ ದೇವದಾಸಿ ತಾಯಂದಿರ ಮರುಸಮೀಕ್ಷೆ ನಡೆಸಲು ಸರ್ಕಾರಕ್ಕೆ ಮನವಿ
ಬೀದರ್: ಕರ್ನಾಟಕ ಸರ್ಕಾರದಿಂದ 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 156ರ ಪ್ರಕಾರ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ನಡೆಸುವ ಆದೇಶ ಹೊರಡಿಸಲಾಗಿದ್ದರೂ, ಬೀದರ್ ಜಿಲ್ಲೆಯನ್ನು ಆ ಪಟ್ಟಿಯಿಂದ ಹೊರತುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ದೇವದಾಸಿ ತಾಯಂದಿರ ಹೆಸರುಗಳನ್ನು ಮರು ಸೇರಿಸಿ ಸಮೀಕ್ಷೆ ನಡೆಸುವಂತೆ ‘ಸ್ಲಂ ಜನಾಂದೋಲನ ಕರ್ನಾಟಕ’ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮಮಇ 55 ಮಅನಿ 2025, ದಿನಾಂಕ 09-09-2025ರ ಆದೇಶದ ಅನುಸಾರ ಮರುಸಮೀಕ್ಷೆ ನಡೆಯಬೇಕಿದೆ. ಆದರೆ, ಬೀದರ್ ಜಿಲ್ಲೆ ಪಟ್ಟಿ ಸೇರಿಲ್ಲದ ಕಾರಣ ಬಸವಕಲ್ಯಾಣ ತಾಲೂಕಿನಲ್ಲಿ ಮಾತ್ರ ಸುಮಾರು 25 ದೇವದಾಸಿ ತಾಯಂದಿರ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನುಳಿದ ಏಳು ತಾಲೂಕುಗಳಲ್ಲಿ ಸಹ ದೇವದಾಸಿ ತಾಯಂದಿರು ಇರುವ ಮಾಹಿತಿ ಸಂಘಟನೆಗಳಿಗೆ ಲಭ್ಯವಾಗಿದೆ.
ಸಂಘಟನೆ ಪರವಾಗಿ ಮಾತನಾಡಿದ ಸದಸ್ಯರು, “ದೇವದಾಸಿ ತಾಯಂದಿರ ಜೀವನ ಮಾನವಿಕತೆ, ಗೌರವ ಮತ್ತು ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ. ಸಮೀಕ್ಷೆಯಲ್ಲಿ ಬೀದರ್ ಜಿಲ್ಲೆ ಸೇರದಿರುವುದು ಗಂಭೀರ ವಿಷಯ. ಉಳಿದ ತಾಲೂಕುಗಳಲ್ಲಿಯೂ ಮರುಸಮೀಕ್ಷೆ ಮಾಡಿ ಎಲ್ಲಾ ತಾಯಂದಿರಿಗೂ ಸರಿಯಾದ ನೆರವು ಮತ್ತು ಯೋಜನೆಗಳ ಪ್ರಯೋಜನ ತಲುಪುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದರು.
ಮನವಿ ಪತ್ರವನ್ನು ಜಿಲ್ಲಾ ಆಹ್ವಾನಿತ ಸದಸ್ಯರು ಸರ್ಕಾರದ ಗಮನಕ್ಕೆ ತಂದಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಬೇಡಿಕೆ ವ್ಯಕ್ತಪಡಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
