ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
06-03-2025
ಸುದ್ದಿ ಮಾಧ್ಯಮಗಳ ಮೇಲ್ವಿಚಾರಣಾ ಕೇಂದ್ರ ಆರಂಭಿಸಲು ಮಹಾರಾಷ್ಟ್ರ ಸರ್ಕಾರದ ಸಿದ್ಧತೆ !
ಮುಂಬೈ: ಪ್ರಿಂಟ್, ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳ ಮೇಲೆ ನಿಗಾ ಇಡಲು ಮಹಾರಾಷ್ಟ್ರ ಸರ್ಕಾರ ಮಾಧ್ಯಮ ಮೇಲ್ವಿಚಾರಣಾ ಸೆಲ್ ಆರಂಭಿಸಲು ನಿರ್ಧರಿಸಿದೆ. ಇದಕ್ಕಾಗಿ 10 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಈ ಸೆಲ್ ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲ ಸುದ್ದಿ ವರದಿಗಳನ್ನು ಸಂಗ್ರಹಿಸಿ, ಇದರಲ್ಲಿನ ನೈಜ ಮತ್ತು ಸುಳ್ಳು ಸುದ್ದಿಗಳನ್ನು ವಿಶ್ಲೇಷಿಸಲಿದೆ. ನಂತರ ಈ ಕೇಂದ್ರವು ಸುಳ್ಳು ಅಥವಾ ದಾರಿ ತಪ್ಪಿಸುವ ಸುದ್ದಿಗೆ ಸ್ಪಷ್ಟೀಕರಣ ಸಿದ್ಧಪಡಿಸಲಿದೆ.
ತಪ್ಪುದಾರಿಗೆಳೆಯುವ ಸುದ್ದಿ ಪ್ರಕಟವಾಗಿದ್ದರೆ, ಅದರ ಬಗ್ಗೆ ತಕ್ಷಣವೇ ಮಾಹಿತಿ ನೀಡಲಾಗುವುದು. ನಕಾರಾತ್ಮಕ ಸುದ್ದಿ ಇದ್ದರೆ ಅದಕ್ಕೆ ತ್ವರಿತವಾಗಿ ಸ್ಪಷ್ಟೀಕರಣ ನೀಡಲಾಗುವುದು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪತ್ರಿಕೆಗಳು, ಚಾನೆಲ್ಗಳು ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ಗಳು ಬಹು ದೊಡ್ಡ ಸಂಖ್ಯೆಯಲ್ಲಿ ಬೆಳೆಯುತ್ತಿರುವುದರಿಂದ ಮತ್ತು ಸರ್ಕಾರಿ ಯೋಜನೆಗಳು, ನೀತಿಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಒಂದೇ ವೇದಿಕೆಯಡಿ ನೀಡುವ ಉದ್ದೇಶದಿಂದ ಮಾಧ್ಯಮ ಮೇಲ್ವಿಚಾರಣಾ ಸೆಲ್ ಸ್ಥಾಪಿಸಲಾಗುತ್ತಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರವನ್ನು ವಾರ್ತಾ ಮತ್ತು ಪ್ರಚಾರ ನಿರ್ದೇಶನಾಲಯ ನಿರ್ವಹಿಸಲಿದೆ.
ಮಾಧ್ಯಮ ಸೆಲ್ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡಿದೆ. ಸರ್ಕಾರಿ ಸಂಬಂಧಿತ ಸುದ್ದಿಗಳನ್ನು ಪಿಡಿಎಫ್ ರೂಪದಲ್ಲಿ ಸಂಗ್ರಹಿಸಲು ವೃತ್ತಿಪರ ಸಲಹೆಗಾರರನ್ನು ನೇಮಿಸಲಾಗುವುದು. ಸುದ್ದಿಗಳನ್ನು ಸಕಾರಾತ್ಮಕ, ನಕಾರಾತ್ಮಕ ಸುದ್ದಿ, ಇಲಾಖಾ ಸುದ್ದಿಗಳು, ಸಮಸ್ಯೆಗಳು, ಘಟನೆಗಳು ಮತ್ತು ವ್ಯಕ್ತಿ ಕೇಂದ್ರಿತ ಸುದ್ದಿಗಳೆಂದು ವಿಂಗಡಿಸಲಾಗುತ್ತದೆ.
ಎಲೆಕ್ಟ್ರಾನಿಕ್ ಮೀಡಿಯಾ ಅಥವಾ ಟಿವಿ ಚಾನೆಲ್ಗಳ ಮೇಲ್ವಿಚಾರಣೆಯ ಸಮಯದಲ್ಲಿ, ಸಲಹೆಗಾರರು ನ್ಯೂಸ್ ಟ್ರೆಂಡ್, ಮೂಡ್ ಮತ್ತು ಸುದ್ದಿ ಓದುವವರ ಟೋನ್ ಬಗ್ಗೆ ಗಂಟೆಗೊಮ್ಮೆ ಎಚ್ಚರಿಕೆಗಳನ್ನು ನೀಡಲಿದ್ದಾರೆ. ಸಲಹೆಗಾರರನ್ನು ಒಂದು ವರ್ಷದ ಅವಧಿಗೆ ಇ-ಟೆಂಡರ್ ಪ್ರಕ್ರಿಯೆಯ ಮೂಲಕ ನೇಮಿಸಿಕೊಳ್ಳಲಾಗುವುದು ಎಂದು ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ.
