ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
24-04-2025
SRH Vs MI – ಇಶಾನ್ ಕಿಶನ್ ವಿವಾದಿತ `ಔಟ್’ – ಮ್ಯಾಚ್ ಫಿಕ್ಸಿಂಗ್ ಚರ್ಚೆ!
ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಬುಧವಾರ ನಡೆದ ಪಂದ್ಯ ಫಿಕ್ಸ್ ಆಗಿತ್ತೇ? ಎಂಬ ಚರ್ಚೆ ಆರಂಭವಾಗಿದೆ.
ಸನ್ ರೈಸರ್ಸ್ ತಂಡದ ಬ್ಯಾಟರ್ ಇಶಾನ್ ಕಿಶನ್ ಅವರು ಅಂಪೈರ್ ತೀರ್ಮಾನವನ್ನು ಪ್ರಶ್ನಿಸದೇ ಪೆವಿಲಿಯನ್‌ನತ್ತ ಯಾಕೆ ತೆರಳಿದರು ಎಂಬುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬ್ಯಾಟರ್, ಬೌಲರ್ ಮತ್ತು ಅಂಪೈರ್ ಗಳ ವರ್ತನೆ ನೋಡಿ ನೆಟ್ಟಿಗರು ಇದು ಮ್ಯಾಚ್ ಫಿಕ್ಸಿಂಗ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನಡೆದಿದ್ದೇನು? : ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟ್ರಾವಿಸ್ ಹೆಡ್ ಅವರು 2ನೇ ಓವರ್ ನ2ನೇ ಎಸೆತದಲ್ಲಿ ಡಕೌಟ್ ಆದರು. ಬಳಿಕ ಬಂದ ಇಶಾನ್ ಕಿಶನ್ ಅವರು ಕೇವಲ 1 ರನ್ ಗಳಿಸಿದ್ದರು, ಆಗ ವೇಗಿ ದೀಪಕ್ ಚಾಹರ್ ಎಸೆದ 3ನೇ ಓವರಿನ ಮೊದಲನೇ ಎಸೆತದಲ್ಲೇ ಔಟ್ ಆಗಿದ್ದೇನೆಂದು ತಾನಾಗಿಯೇ ಪೆವಿಲಿಯನ್‌ಗೆ ಮರಳಿದ್ದರು.
ಚಾಹರ್ ಎಸೆದ ಚೆಂಡು ಲೆಗ್ ಸೈಡ್ ನಲ್ಲಿ ಇಶಾನ್ ಕಿಶನ್ ಅವರ ತಲೆಯ ಸಮೀಪದಿಂದ ತೆರಳಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ವೇಳೆ, ನಾಯಕ ಹಾರ್ದಿಕ್ ಪಾಂಡ್ಯನನ್ನು ಹೊರತುಪಡಿಸಿದರೆ ಬೇರಾರೂ ಅಪೀಲ್ ಮಾಡಿರಲಿಲ್ಲ. ಬೌಲರ್ ಸಹ ಗೊಂದಲದಲ್ಲಿದ್ದರು. ಆದರೆ ಅಂಪೈರ್ ಮಾತ್ರ ಒವರ್‌ನ ಮೊದಲ ಬೌನ್ಸರ್ ಎಂದು ಭುಜದ ಮೇಲೆ ಕೈ ತೋರಿಸಿದವರು ತಕ್ಷಣವೇ ಬದಲಾಯಿಸಿ ತಲೆ ಮೇಲೆ ಕೈಯೆತ್ತಿ ಔಟ್ ಎಂದು ತೀರ್ಪು ನೀಡಿದ್ದು ಪ್ರೇಕ್ಷಕರ ಗೊಂದಲಕ್ಕೆ ಕಾರಣವಾಗಿತ್ತು. ಆಶ್ಚರ್ಯವೆಂದರೆ ಇಶಾನ್ ಕಿಶನ್ ಅವರಾಗಿಯೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಲು ಶುರು ಮಾಡಿದ ಮೇಲೆ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಅಲ್ಟ್ರಾ ಎಡ್ಜ್ ಟೆಕ್ನಾಲಜಿಯಲ್ಲಿ ಅವರು ನಾಟೌಟ್ ಎಂಬುದು ಸಾಬೀತಾಗಿದೆ.
ಇದೀಗ ಕೆಲವರು ಇದು ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದ್ದಾರೆ. ಮತ್ತೆ ಕೆಲವರು ಇಶಾನ್ ಕಿಶನ್ ಅವರು ತಮ್ಮ ಹಿಂದಿನ ತಂಡವಾಗಿರುವ ಮುಂಬೈ ಇಂಡಿಯನ್ಸ್ ಋಣವನ್ನು ಈ ಮೂಲಕ ತೀರಿಸಿದ್ದಾರೆ ಎಂದು ಗೇಲಿ ಮಾಡಿದ್ದಾರೆ.
