ವರದಿಗಾರರು :
ರಾಮಕೃಷ್ಣೇಗೌಡ ||
ಸ್ಥಳ :
ಹುಣಸೂರು
ವರದಿ ದಿನಾಂಕ :
27-11-2025
ಮಹಿಳಾ ಸಬಲೀಕರಣಕ್ಕಾಗಿ ಹುಣಸೂರಿನಲ್ಲಿ ಜಾಗೃತಿ ಕಾರ್ಯಕ್ರಮ
ಹುಣಸೂರು ಪಟ್ಟಣದ ಸ್ಟೋರ್ ಬೀದಿಯಲ್ಲಿ ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಾಧಿಕಾರಿಯವರ ಕಚೇರಿ ಹಾಗೂ ಉಚಿತ ಕಾನೂನು ಸೇವಾ ಸಮಿತಿ ಹುಣಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದೌರ್ಜನ್ಯ ನಿಷೇಧ ಕಾಯಿದೆ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಅರಿವು ಕಾರ್ಯಕ್ರಮವನ್ನು ಗುರುವಾರ ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೌರವಾನ್ವಿತ ತಾಲ್ಲೂಕು ಪ್ರಧಾನ ನ್ಯಾಯಾಧೀಶೆ ಶ್ರೀಮತಿ ಆಯಿಷಾ ಬಿ. ವಜೀದ್ ಅವರು, “ಇಂದಿನ ಸಮಾಜವು ಬಾಲ್ಯ ವಿವಾಹದಂತಹ ಹಿನ್ನಡೆಯಿಂದ ಹೊರಬಂದು ನಾಗರೀಕತೆ ಹಾಗೂ ಪ್ರಜ್ಞೆಯತ್ತ ಹೆಜ್ಜೆ ಹಾಕುತ್ತಿದೆ. ಮಹಿಳಾ ಸಬಲೀಕರಣ, ಸಮಾನತೆ, ಆರ್ಥಿಕ ಸ್ವಾವಲಂಬನೆ ಮತ್ತು ಕಾನೂನು ಅರಿವು ಹೆಚ್ಚುತ್ತಿರುವುದು ಸಂತೋಷಕರ. ಇನ್ನೂ ಹೆಚ್ಚಿನ ಪ್ರಗತಿಯಿಗಾಗಿ ಭಾರತೀಯ ಸಂವಿಧಾನವೇ ನಮ್ಮಿಗೆ ಆಶ್ರಯ ಮತ್ತು ಮಾರ್ಗದರ್ಶಕ ವೇದಿಕೆ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸರಕಾರಿ ಸಹಾಯಕ ಅಭಿಯೋಜಕಿ ಶ್ರೀಮತಿ ಪಾರ್ವತಿ, ಪ್ಯಾನಲ್ ವಕೀಲರಾದ ಕುಮಾರಿ ಶ್ವೇತಾ, ಹುಣಸೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಶಿವಣ್ಣೇ ಗೌಡ, ಎ.ಸಿ.ಡಿ.ಪಿ.ಒ ಕೆ. ಸೋಮಯ್ಯ, ಹಾಗೂ ವೃತ್ತ ಮೇಲ್ವಿಚಾರಕಿ ಕುಮಾರಿ ಜಯಶ್ರೀ ಅಂಗಡಿ ಗಣ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅತಿಥಿಗಳು ಮಹಿಳೆಯರ ಕಾನೂನು ಹಕ್ಕುಗಳು, ದೌರ್ಜನ್ಯ ನಿಷೇಧ ಕಾಯಿದೆ, ಹಾಗೂ ಸಾಮಾಜಿಕ ಜಾಗೃತಿಯ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಎ.ಸಿ.ಡಿ.ಪಿ.ಒ ಕೆ. ಸೋಮಯ್ಯ ಅವರು ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ಕుమಾರಿ ಜಯಶ್ರೀ ಅಂಗಡಿ ಅವರು ನಿರೂಪಿಸಿದರು. ಪ್ರಾರ್ಥನಾ ಗೀತೆಯನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮಮ್ಮ ಅವರು ಹಾಡಿದರು. ಹುಣಸೂರು ತಾಲ್ಲೂಕಿನ ಅನೇಕ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದರು.
