ವರದಿಗಾರರು :
ಕೆ ಜೆ ಸುರೇಶ ||
ಸ್ಥಳ :
ಹಾಸನ
ವರದಿ ದಿನಾಂಕ :
01-12-2025
ಸರ್ಕಾರಿ ಶಾಲೆ ಮುಚ್ಚದಿರಿ: ರಾಜಘಟ್ಟದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ
ಹಾಸನ: ಕೆಪಿಎಸ್–ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಸರ್ಕಾರದ ನೀತಿಗೆ ವಿರೋಧವಾಗಿ ಹಾಸನ ತಾಲ್ಲೂಕಿನ ರಾಜಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಬೇಕೆಂದು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕಿ ಚೈತ್ರ ಅವರು, “ಸರ್ಕಾರ ಕೆಪಿಎಸ್–ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ರಾಜ್ಯದ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವತ್ತ ಹೆಜ್ಜೆ ಹಾಕಿದೆ. ಹಾಸನ ಜಿಲ್ಲೆಯಲ್ಲಿ ಮಾತ್ರ 1,942 ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಘಟ್ಟದ ಈ ಶಾಲೆಯೂ ಅದರಲ್ಲಿ ಒಂದಾಗಿದೆ,” ಎಂದು ಆರೋಪಿಸಿದರು.
ರಾಜಘಟ್ಟ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಎರಡು–ಮೂರು ವರ್ಷಗಳಲ್ಲಿ 20ರಿಂದ 41ಕ್ಕೆ ಏರಿಕೆಯಾಗಿದೆ. ಸ್ಥಳೀಯ ಗ್ರಾಮಸ್ಥರು ಹಾಗೂ ಪೋಷಕರು ಶಾಲೆಯ ಅಭಿವೃದ್ಧಿಗೆ ಶ್ರಮಿಸಿ ಸೌಲಭ್ಯಗಳನ್ನು ಹೆಚ್ಚಿಸಿರುವುದನ್ನು ಅವರು ಒತ್ತಿ ಹೇಳಿದರು. “ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಹೆಚ್ಚಿನವರು ಬಡ ರೈತರ, ಕೂಲಿ ಕಾರ್ಮಿಕರ ಹಾಗೂ ವಲಸೆ ಕಾರ್ಮಿಕರ ಮಕ್ಕಳು. 5 ಕಿ.ಮೀ ದೂರದ ಬೂವನಹಳ್ಳಿ ಶಾಲೆಗೆ ವಿಲೀನ ಮಾಡಿದರೆ ಮಕ್ಕಳಿಗೆ ಸಂಚಾರ ದುಸ್ತರವಾಗಲಿದೆ,” ಎಂದು ಚೈತ್ರ ಚಿಂತೆಯನ್ನು ವ್ಯಕ್ತಪಡಿಸಿದರು. ಮಹಾತ್ಮ ಜ್ಯೋತಿಬಾ ಫುಲೆ ಅವರ ಶಿಕ್ಷಣ ತತ್ವಗಳನ್ನು ಉಲ್ಲೇಖಿಸಿದ ಅವರು, “ಶಿಕ್ಷಣವು ಎಲ್ಲರಿಗೂ ತಲುಪುವಂತೆ ಸಾರ್ವತ್ರಿಕವಾಗಿರಬೇಕು ಎಂದು ಫುಲೆ ಪ್ರತಿಪಾದಿಸಿದ್ದರು. ಆದರೆ ಇಂದಿನ ಸರ್ಕಾರಗಳು ವಿವಿಧ ಯೋಜನೆಗಳ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವ ಮೂಲಕ ಆ ಮಹನೀಯರ ಕನಸುಗಳನ್ನು ನಿರ್ಲಕ್ಷಿಸುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಸಹ ಸಂಚಾಲಕಿ ಸುಷ್ಮಾ, ಕಾರ್ಯಕರ್ತರು ರಂಗನಾಥ್, ತರುಣ್ ಸೇರಿದಂತೆ ರಾಜಘಟ್ಟ ಗ್ರಾಮದ ಧರ್ಮಪಾಲ,ಪುರುಷೋತ್ತಮ್, ರಮೇಶ್, ಗಂಗಾಧರ್, ಕಮಲಮ್ಮ, ಗಿರೀಶ ಹಾಗೂ ಶಾಲೆಯ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
