ವರದಿಗಾರರು :
ಮಲ್ಲಿಕಾರ್ಜುನ ಬಿ. ಹಡಪದ, ||
ಸ್ಥಳ :
ಕಲಬುರಗಿ
ವರದಿ ದಿನಾಂಕ :
30-10-2025
ಅಪ್ರಾಪ್ತ ಬಾಲಕಿ ಸೌಜನ್ಯ ಹಡಪದ ಕೊಲೆ ಖಂಡಿಸಿ ಹಡಪದ ಅಪ್ಪಣ್ಣ ಸಮಾಜದ ಬೃಹತ್ ಹೋರಾಟ
ಯಾದಗಿರ: ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದ ಪ್ರಥಮ ಪಿಯುಸಿ ವಿದ್ಯಾರ್ಥಿನಿ 17 ವರ್ಷದ ಸೌಜನ್ಯ ಹಡಪದ ಅವರನ್ನು ಅಪಹರಿಸಿ ಕ್ರೂರವಾಗಿ ಹತ್ಯೆ ಮಾಡಿ ಶವವನ್ನು ಕಾಲುವೆಯಲ್ಲಿ ಬಿಸಾಕಿದ ಘಟನೆಯು ಜಿಲ್ಲೆಯಾದ್ಯಂತ ಆಕ್ರೋಶ ಹುಟ್ಟಿಸಿದೆ.
ಈ ನೃಶಂಸ ಕೊಲೆಯನ್ನು ಖಂಡಿಸಿ ಯಾದಗಿರ ಜಿಲ್ಲಾಧಿಕಾರಿ ಕಚೇರಿ ಎದುರು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಆರೋಪಿಗಳನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ನಾಯಕರ ಪ್ರಕಾರ, ಕುಟುಂಬದವರು ಸೌಜನ್ಯ ಕಾಣೆಯಾದ ಬಗ್ಗೆ ಕೋಡೆಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಈ ಕಾರಣದಿಂದಲೇ ದುರ್ಘಟನೆ ನಡೆದಿದೆ ಎಂದು ಆರೋಪಿಸಿದರು. ಕರ್ತವ್ಯ ಲೋಪದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾನಂತರ ಸಮಾಜದ ಪ್ರತಿನಿಧಿಗಳು ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರು, ಗೃಹ ಹಾಗೂ ಮಹಿಳಾ–ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಹೋರಾಟದಲ್ಲಿ ಜಿಲ್ಲಾ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಡಪದ ಕುಳಗೇರಿ ಸೇರಿದಂತೆ ನೂರಾರು ಸದಸ್ಯರು ಮತ್ತು ಸಮಾಜದ ಗಣ್ಯರು ಭಾಗವಹಿಸಿದರು. ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9739113333 ಸಂಖ್ಯೆಯನ್ನು ಸೇರಿಸಿ.
