ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
28-03-2025
ಇಂದು ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್ ಫೈಟ್: ಚೆನ್ನೈ ಭದ್ರಕೋಟೆ ಛಿದ್ರ ಮಾಡಲು ಆರ್‌ಸಿಬಿ ಪ್ಲ್ಯಾನ್ !
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ರಣರೋಚಕ ಕದನಕ್ಕೆ ಕ್ಷಣಗಣನೆ ಬಾಕಿಯಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚೆನ್ನೈನ ಎಂ.ಎ.ಚಿದಂಬರಂ ಮೈದಾನ ಇಂದು ಆರ್‌ಸಿಬಿ vs ಚೆನ್ನೈ ನಡುವಿನ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ.
ಐಪಿಎಲ್‌ನಲ್ಲೇ ಗರಿಷ್ಠ ಅಭಿಮಾನಿ ಬಳಗವನ್ನು ಹೊಂದಿರುವ ತಂಡಗಳಾದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಕಾದಾಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿ ಎರಡೂ ತಂಡಗಳು ಆಡಿರುವ ಮೊದಲ ಪಂದ್ಯವನ್ನು ಗೆದ್ದಿವೆ. ಆದರೆ ಚೆನ್ನೈನಲ್ಲಿ ಆರ್‌ಸಿಬಿ ಗೆದ್ದಿರುವುದು 2008ರಲ್ಲಿ ಒಮ್ಮೆ ಮಾತ್ರ. ಉಳಿದ 8 ಪಂದ್ಯಗಳಲ್ಲಿ ಸೋತಿದೆ.
ಅದೇ ಹಳೆಯ ಲೆಕ್ಕಾಚಾರದಲ್ಲೇ ಪ್ರಸ್ತುತ ಪಂದ್ಯವನ್ನು ಅಳೆಯಲು ಸಾಧ್ಯವಿಲ್ಲ. ಈ ಬಾರಿ ಆರ್‌ಸಿಬಿ ತಂಡವನ್ನು ನೋಡುವುದಾದರೆ ಹೆಚ್ಚು ಬಲಿಷ್ಠವಾಗಿದೆ. ಕೊಹ್ಲಿ, ಸಾಲ್ಟ್, ರಜತ್‌ರಿಂದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿದೆ. ಈ ತಂಡಕ್ಕಿರುವ ಒಂದು ಪ್ಲಸ್ ಪಾಯಿಂಟ್ ಅಂದ್ರೆ ಆಲ್‌ರೌಂಡರ್‌ಗಳು. ಲಿವಿಂಗ್ ಸ್ಟೋನ್, ಕೃಣಾಲ್ ಪಾಂಡ್ಯ ಎರಡೂ ಹೊಣೆ ನಿಭಾಯಿಸುತ್ತಿದ್ದಾರೆ. ಹೇಝಲ್‌ವುಡ್, ಭುವನೇಶ್ವರ್, ಯಶ್ ದಯಾಳ್ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ಬಲ ತುಂಬಿದ್ದಾರೆ. ಚೆನ್ನೈನ ಸ್ಪಿನ್ ಸ್ನೇಹಿ ಅಂಕಣದಲ್ಲಿ ಅಬ್ಬರಿಸಬಲ್ಲ ಸ್ಪಿನ್ನರ್ ಗಳಿಲ್ಲದಿರುವುದು ತಂಡದ ದೌರ್ಬಲ್ಯವಾಗಿದೆ ಅಷ್ಟೇ.
ಚೆನ್ನೈ ತಂಡದಲ್ಲಿ ಆರ್.ಅಶ್ವಿನ್, ಜಡೇಜಾರಂತಹ ಅತ್ಯುತ್ತಮ ಸ್ಪಿನ್ನರ್‌ಗಳಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಬಲವಾದ ಯಾವ ಆಟಗಾರರೂ ಕಾಣುತ್ತಿಲ್ಲ. ರಚಿನ್ ರವೀಂದ್ರ, ಋತು ರಾಜ್‌ರನ್ನು ಹೊರತುಪಡಿಸಿದರೆ ಉತ್ತಮ ಎನ್ನಬಲ್ಲ ಬ್ಯಾಟರ್‌ಗಳಿಲ್ಲ. ಧೋನಿಯ ಇಲ್ಲಿವರೆಗಿನ ಅಬ್ಬರ ಇಂದು ಇರಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
