ವರದಿಗಾರರು :
ರಘು ಕುಮಾರ ಆರ್ ಎಸ್ ||
ಸ್ಥಳ :
ಮಂಡ್ಯ
ವರದಿ ದಿನಾಂಕ :
11-06-2025
ನಮಗೆ ಬೇಡ ತಮನ್ನಾ; ಹಸುಗಳಿಗೆ ಮೈಸೂರು ಸ್ಯಾಂಡಲ್ ಸೋಪು ಹಚ್ಚಿ ಸ್ನಾನ ಮಾಡಿಸಿದ ಮಂಡ್ಯದ ಜನ!
ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆಯನ್ನು ವಿರೋಧಿಸಿ ಮಂಡ್ಯದಲ್ಲಿ ಹಸುಗಳಿಗೆ ಸೋಪಿನಿಂದ ಸ್ನಾನ ಮಾಡಿಸಿ ಪ್ರತಿಭಟನೆ ನಡೆಸಲಾಗಿದೆ. ರಾಜ್ಯದ ನಟಿಯರಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಂಡ್ಯ (ಜೂನ್ 11): ಮೈಸೂರ್ ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆಯಾದ ಹಿನ್ನೆಲೆ ಮಂಡ್ಯದಲ್ಲಿ ಹಸುಗಳ ಮೈ ತೊಳೆಯಲು ಮೈಸೂರು ಸ್ಯಾಂಡಲ್ ಸೋಪನ್ನು ಬಳಸುವ ಮೂಲಕ ವಿಶಿಷ್ಟ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ, ರಾಜ್ಯದ ನಟಿಯರಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ಉತ್ಪನ್ನವನ್ನಾದ ಮೈಸೂರ್ ಸ್ಯಾಂಡಲ್ ಸೋಪ್‌ಗೆ ಬಾಲಿವುಡ್ ಚಿತ್ರರಂಗದ ನಟಿ ತಮನ್ನಾ ಭಾಟಿಯ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದಾರೆ. ತಮನ್ನಾ ಅವರನ್ನು ವಿರೋಧಿಸುತ್ತಾ, ಮೈಸೂರು ಸ್ಯಾಂಡಲ್ ಸೋಪನ್ನು ಹಸುಗಳಿಗೆ ಮೈತೊಳೆಯಲು ಬಳಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀರಂಗಪಟ್ಟಣದ ಮಂಡ್ಯ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ನಟಿ ತಮ್ಮನ್ನಾ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ, ಮೈಸೂರ್ ಸ್ಯಾಂಡಲ್ ಸೋಪ್ ಅನ್ನು ಹಸುವಿಗೆ ಹಚ್ಚಿ ಸ್ನಾನ ಮಾಡಿಸಿ ತಮ್ಮ ವಿರೋಧವನ್ನು ಹೊರಹಾಕಿದರು. 'ಕರ್ನಾಟಕದಲ್ಲಿ ಹಲವಾರು ಪ್ರತಿಭಾನ್ವಿತ ನಟ-ನಟಿಯರು ಇದ್ದಾರೆ. ನಮ್ಮ ರಾಜ್ಯದವರಿಗೇ ಆದ್ಯತೆ ನೀಡುವ ಬದಲು, ಅನ್ಯ ಭಾಷೆಯ ನಟಿಯರಾದ ತಮನ್ನಾ ಅವರಿಗೆ ಈ ಗರಿಮೆ ನೀಡಲಾಗಿದೆ ಎಂಬುದು ಖಂಡನೀಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ರಕ್ಷಣಾ ವೇದಿಕೆಯ ಸದಸ್ಯರು ಹಾಗೂ ಸ್ಥಳೀಯರು ಈ ಕುರಿತು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಮತ್ತು ಕಂಪನಿಯ ನಿರ್ಧಾರವನ್ನು ಪರಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ. ಅವರು 'ಮೈಸೂರಿನ ಸ್ಯಾಂಡಲ್ ಸೋಪ್ ಹೆಸರೇ ಸೂಚಿಸುವಂತೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೆಮ್ಮೆಯಾಗಿದೆ. ಈ ಸೋಪಿನ ರಾಯಭಾರಿ ಆಗಬೇಕಾದವರು ಕೂಡ ನಮ್ಮ ಸ್ಥಳೀಯ ಸಂಸ್ಕೃತಿಗೆ ಪರಿಚಿತರೇ ಆಗಿರಬೇಕು' ಎಂಬ ನಿಲುವನ್ನು ಸ್ಪಷ್ಟಪಡಿಸಿದರು. ತಮನ್ನಾ ಬದಲು ಕನ್ನಡ ನಟಿಯರನ್ನು ಆಯ್ಕೆ ಮಾಡುವಂತೆ ಆಗ್ರಹಿಸಿ, ಈ ನಿರ್ಧಾರವನ್ನು ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಘಟನೆ ರಾಜ್ಯದೊಳಗೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸ್ಥಳೀಯರ ಆತ್ಮಗೌರವದ ಪ್ರಶ್ನೆಯಾಗಿ ಇದನ್ನು ಪರಿಗಣಿಸಲಾಗುತ್ತಿದೆ. ಈ ಬಗ್ಗೆ ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿರುವ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮೈಸೂರು ಸ್ಯಾಂಡಲ್ ಸೋಪನ್ನು ರಾಷ್ಟ್ರ ಹಾಗೂ ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯಬೇಕಿದೆ. ಈ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಚಿತವಾಗಿರುವ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೂ ರಾಜ್ಯದಾದ್ಯಂತ ಇನ್ನೂ ಸರ್ಕಾರದ ವಿರುದ್ಧ ಹಾಗೂ ನಟಿ ತಮನ್ನಾ ಆಯ್ಕೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗುತ್ತಲೇ ಇದೆ.
