ವರದಿಗಾರರು :
ಕೆ ಎಸ್ ವೀರೇಶ್ ||
ಸ್ಥಳ :
ಕೂಡ್ಲಿಗಿ
ವರದಿ ದಿನಾಂಕ :
27-11-2025
ಹೂಡೇಂನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ – ಧರ್ಮಸ್ಥಳ ಸೇವಾ ಪರಂಪರೆಯ ಮೆಚ್ಚುಗೆ
ಕೂಡ್ಲಿಗಿ: ತಾಲೂಕಿನ ಹೂಡೇಂ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ಕೂಡ್ಲಿಗಿ, ತಾಯಕನಹಳ್ಳಿ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಭವ್ಯವಾಗಿ ಜರುಗಿತು. ಈ ಕಾರ್ಯಕ್ರಮವನ್ನು ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ್ ಮಾತನಾಡಿ, “ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಬಡವರಿಗೆ ಮಾಸಾಶನ, ಮನೆ ನಿರ್ಮಾಣ, ಮದ್ಯವರ್ಜನೆ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಹೆಗ್ಗಡೆವರು ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದು ಹೇಳಿದರು.
ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಹೆಗ್ಗಡೆವರ ಸಮಾಜಮುಖಿ ಕಾರ್ಯಕ್ರಮಗಳು ದೇಶದ ಮಟ್ಟದಲ್ಲಿ ಮಾದರಿಯಾಗಿವೆ ಎಂದು ಶ್ಲಾಘಿಸಿದರು. ಮಕ್ಕಳ ಶಿಕ್ಷಣ, ಆರ್ಥಿಕ ನೆರವು, ವಿಪತ್ತು ನಿರ್ವಹಣಾ ಸೇವೆಗಳು ಗ್ರಾಮಾಭಿವೃದ್ಧಿಗೆ ಬಲ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಯೋಜನಾಧಿಕಾರಿ ಸಂತೋಷ ಅವರು, ಧರ್ಮಸ್ಥಳದ ಸಂಘಗಳು ಕೇವಲ ಸ್ವಸಹಾಯ ಸಂಘಗಳಲ್ಲ, ಗ್ರಾಮೀಣ ಅಭಿವೃದ್ಧಿ, ಕೆರೆ-ಕಟ್ಟೆಗಳ ಪುನಶ್ಚೇತನ, ದೇವಸ್ಥಾನಗಳ ಜೀರ್ಣೋದ್ಧಾರ, ರೈತರ ಹಾಗೂ ಮಹಿಳೆಯರ ಸಬಲೀಕರಣದತ್ತ ಗಮನ ಹರಿಸುತ್ತಿವೆ ಎಂದು ತಿಳಿಸಿದರು. ಬಡತನ ನಿರ್ಮೂಲನೆ ಹಾಗೂ ನಿಸರ್ಗ ಸಂರಕ್ಷಣೆಯ ಮಹತ್ವವನ್ನೂ ಅವರು ವಿವರಿಸಿದರು.
ಪೂಜ್ಯರ 58 ವರ್ಷಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ಕೃಷಿ ಕ್ಷೇತ್ರಗಳ ಸೇವೆಯನ್ನು ಸ್ಮರಿಸಿ, ಭಕ್ತರು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಅರ್ಚಕ ಜಗದೀಶರ ವೈದಿಕತ್ವದಲ್ಲಿ ಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ನವೀನ್ ಕುಮಾರ್, ಎಎಸ್ಐ ಮಲ್ಲೇಶ, ವೈದ್ಯಾಧಿಕಾರಿ ಡಾ. ಸಂದೀಪ್, ಸಿದ್ದೇಶಣ್ಣ, ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ, ಗ್ರಾಮ ಪಂಚಾಯತಿ ಸದಸ್ಯರು ರಾಮಚಂದ್ರಪ್ಪ, ಕೆ. ರಾಘವೇಂದ್ರ, ಪುಟ್ಟಮ್ಮ, ಮಲ್ಲಿಕಾರ್ಜುನ್, ಶಶಿಕಲಾ, ಸುಂದರಮ್ಮ ಹಾಗೂ ನಿವೃತ್ತ ಗ್ರಂಥಪಾಲಕ ಗುರುರಾಜ್ ಸೇರಿದಂತೆ ಅನೇಕ ಗಣ್ಯರು, ಸೇವಾಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
