ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
26-03-2025
ಇಸ್ರೇಲ್ ಸಂಸ್ಥೆಯೊಂದಿಗೆ ರೋಬೋಟ್‌ಗಳ ಅಭಿವೃದ್ಧಿ ಕುರಿತು ಒಪ್ಪಂದ ಮಾಡಿಕೊಂಡ ಬೆಂಗಳೂರಿನ ಕಂಪೆನಿ!
ಬೆಂಗಳೂರು: ಇಸ್ರೇಲ್ ಮೂಲದ Xtend AI ಜೊತೆಗೆ ಬೆಂಗಳೂರು ಮೂಲದ ಟೆಕ್ ಕಂಪೆನಿಯು ರೋಬೋಟ್‌ಗಳ ಸಹ-ಅಭಿವೃದ್ಧಿ ಮತ್ತು ತಯಾರಿಕೆ ಕುರಿತು ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಬೆನ್ನಲ್ಲೇ 'ಫ್ಯಾಶಿಸ್ಟ್ ಇಸ್ರೇಲ್ ಜೊತೆ ವ್ಯವಹಾರ ನಿಲ್ಲಿಸಿ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಕರ್ನಾಟಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ಭಾರತೀಯ ತಂತ್ರಜ್ಞಾನ ಸಂಸ್ಥೆ 'ಅಡ್ವಾನ್ಸ್ ಮೆಕ್ಯಾನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್(AMS-India) ಇಸ್ರೇಲ್‌ನ Xtend AI ಜೊತೆಗೆ ರೋಬೋಟ್‌ಗಳ ಸಹ-ವಿನ್ಯಾಸ, ಅಭಿವೃದ್ಧಿ ಉತ್ಪಾದನೆ ಮತ್ತು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಸ್ವಾಯತ್ತ ರೋಬೋಟ್‌ಗಳನ್ನು ನಿಯೋಜಿಸುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿದೆ.
ಇಸ್ರೇಲ್ ಸರಕಾರ ಮತ್ತು ಕರ್ನಾಟಕ ಸರಕಾರದ ಅಧೀನದ ಡಿಜಿಟಲ್ ಎಕಾನಮಿ ಮಿಷನ್ (KDEM) ಬೆಂಬಲದೊಂದಿಗೆ ದ್ವಿಪಕ್ಷೀಯ ಸಂಶೋಧನೆ ಮತ್ತು ಅಭಿವೃದ್ಧಿ (R&D) ಉತ್ಪಾದನಾ ಉಪಕ್ರಮದ ಭಾಗವಾಗಿ ಈ ಒಪ್ಪಂದ ನಡೆದಿದೆ. ಒಪ್ಪಂದವು ಆರೋಗ್ಯ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಭಾರತ-ಇಸ್ರೇಲ್ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, 'Xtend Al ಮತ್ತು AMS-India ನಡುವಿನ ಈ ಒಪ್ಪಂದವು ಅತ್ಯಾಧುನಿಕ ರೋಬೋಟಿಕ್ಸ್ ಮೂಲಕ ಕರ್ನಾಟಕದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಮೂಲಕ ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಬಲವರ್ಧನೆ ಮಾಡುವಲ್ಲಿ ನಾವು ಬದ್ಧರಾಗಿದ್ದೇವೆ. ಒಪ್ಪಂದವು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು.
Xtend Al ಸಿಇಒ ಹ್ಯಾರಿ ಫಾಕ್ಸ್ ಪ್ರಕಾರ, ಕಂಪೆನಿಯ ಸೇವಾ ರೋಬೋಟ್‌ಗಳು ಮತ್ತು ಟೆಲಿಮೆಡಿಸಿನ್ ಕಿಯೋಸ್ಕ್‌ಗಳು ಆರೋಗ್ಯ ಕ್ಷೇತ್ರಗಳಲ್ಲಿ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಲಿದೆ.
ಇದಲ್ಲದೆ ವೈದ್ಯಕೀಯ ತರಬೇತಿ, ಕೌಶಲ್ಯ ಅಭಿವೃದ್ಧಿ ಸೋಂಕು ನಿಯಂತ್ರಣ, ಸಾಂಕ್ರಾಮಿಕ ನಿಯಂತ್ರಣಕ್ಕೆ ಸನ್ನದ್ಧತೆ ಮೇಲೆ ಒಪ್ಪಂದವು ಕೇಂದ್ರೀಕರಿಸಿದೆ.
ಈ ಒಪ್ಪಂದದ ಭಾಗವಾಗಿ ನಿಯೋಗವು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಮನೋಜ್ ಕುಮಾರ್ ಅವರನ್ನು ಭೇಟಿ ಮಾಡಿ, ಬೌರಿಂಗ್ ಆಸ್ಪತ್ರೆಯಲ್ಲಿ ನೋಂದಣಿ, ಡಿಸ್ಟಾರ್ಜ್ ಪೂರ್ವ ಕಾರ್ಯವಿಧಾನಗಳು ಮತ್ತು ಅಪಘಾತ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಪ್ರಾಯೋಗಿಕ ಯೋಜನೆ ಬಗ್ಗೆ ಚರ್ಚೆಯನ್ನು ನಡೆಸಿದೆ.
ಇಸ್ರೇಲ್ ಜೊತೆಗಿನ ಒಪ್ಪಂದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ:
ಗಾಝಾದಲ್ಲಿ ನರಹತ್ಯೆಯನ್ನು ನಡೆಸುತ್ತಿರುವ ಇಸ್ರೇಲ್‌ನ ನೆತನ್ಯಾಹು ಸರಕಾರದ ಜೊತೆ ಕರ್ನಾಟಕದ ಕಾಂಗ್ರೆಸ್ ಸರಕಾರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕರ್ನಾಟಕ ಸರಕಾರ ಒಪ್ಪಂದವನ್ನು ಕೈಬಿಡಬೇಕು ಆಗ್ರಹ ಕೇಳಿ ಬಂದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ಇಸ್ರೇಲ್ ಜೊತೆ ವ್ಯವಹಾರವನ್ನು ನಿಲ್ಲಿಸಿ, ಕರ್ನಾಟಕ ಕಾಂಗ್ರೆಸ್ ಸರಕಾರದ KDEM ಇಲಾಖೆ ಮತ್ತು ಫ್ಯಾಶಿಸ್ಟ್ ಇಸ್ರೇಲಿ ಸರ್ಕಾರದ Xtend Al ಜೊತೆಗೆ ಮಾಡಿಕೊಂಡ ಒಪ್ಪಂದ ಕೂಡಲೇ ರದ್ದಾಗಲಿ ಎಂದು ಹಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಗ್ರಹಿಸಿದ್ದಾರೆ.
ಈ ಕುರಿತು ಚಿಂತಕ ಶಿವಸುಂದರ್ ಅವರು ಪೋಸ್ಟ್ ಮಾಡಿದ್ದು 'ನವ ನಾಝಿ ಇಸ್ರೇಲಿ ಸರಕಾರವನ್ನು ಬಹಿಷ್ಕರಿಸೋಣ, ಉಗ್ರ ಜನಾಂಗಿಯವಾದಿ ನೆತನ್ಯಾಹು ಸರಕಾರದ ಜೊತೆಗಿನ ಎಲ್ಲಾ ಸಂಬಂಧಗಳನ್ನು ತಿರಸ್ಕರಿಸೋಣ, ಗಾಝಾದ ನರಮೇಧ ನಿಲ್ಲಿಸಲು ಕೈಜೋಡಿಸೋಣ' ಎಂದು ಹೇಳಿದ್ದಾರೆ.
