ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
28-10-2025
ತುಮಕೂರಿನಲ್ಲಿ "ಗೋಕರ್ಣದ ಗೌಡಶಾನಿ" ನಾಟಕ ರಂಗಪ್ರಯೋಗ
ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ (ರಿ) ತುಮಕೂರು ವತಿಯಿಂದ ಅಕ್ಟೋಬರ್ 29ರ ಬುಧವಾರ ಸಂಜೆ 6.30ಕ್ಕೆ ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಸಾಹಿತಿ ಡಾ. ಚಂದ್ರಶೇಖರ ಪಾಟೀಲರ "ಗೋಕರ್ಣದ ಗೌಡಶಾನಿ" ನಾಟಕದ ರಂಗಪ್ರಯೋಗ ನಡೆಯಲಿದೆ.
ಕಳೆದ ಎರಡು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಹೊಸ ನಾಟಕಗಳ ಪ್ರಯೋಗ, ಯುವ ಕಲಾವಿದರಿಗೆ ತರಬೇತಿ, ನಾಟಕ ಕಾರ್ಯಾಗಾರಗಳು ಹಾಗೂ ವಿಚಾರ ಸಂಕಿರಣಗಳ ಮೂಲಕ ರಂಗಭೂಮಿಯ ಬೆಳವಣಿಗೆಗೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ನಿರಂತರವಾಗಿ ಶ್ರಮಿಸುತ್ತಿದೆ. ಈ ಪ್ರಯತ್ನದ ಭಾಗವಾಗಿ ಈ ನಾಟಕದ ಪ್ರದರ್ಶನ ಆಯೋಜಿಸಲಾಗಿದೆ.
ಕೌಡುಮಾರನಹಳ್ಳಿ ಕಾಂತರಾಜು ಅವರ ಬೆಳಕು ಮತ್ತು ರಂಗವಿನ್ಯಾಸ, ಶಿವಕುಮಾರ್ ತಿಮ್ಮಲಾಪುರ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮದ ಪ್ರೇರಕರಾಗಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಹೆಣ್ಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್. ಅಕ್ಕಮ್ಮ, ಕವಿ ಮತ್ತು ಕನ್ನಡ ಅಧ್ಯಾಪಕರಾದ ಡಾ. ಶಿವಣ್ಣ ತಿಮ್ಮಲಾರ, ತುಮಕೂರು ಮಹಾನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್ ಬಿ.ಜಿ., ಹಾಗೂ ತುಮಕೂರು ವಿವಿಯ ಸಂಶೋಧನಾರ್ಥಿ ರಾಹುಲ್.ಆರ್. ಭಾಗವಹಿಸಲಿದ್ದಾರೆ.
ಡಿ.ಸಿ. ಕುಮಾರ್, ದೊಮ್ಮನಕುಪ್ಪೆ ಶಶಿಧರ್ ಕಟ್ಟೆಮನೆ, ಸಾಗರ, ಬಾಲಾಜಿ ಜಿ., ತುಳಸದೇವಿ ಪಿ.ಸಿ., ಶಾಂತ, ಹಾಗೂ ಕೆ.ಎಂ. ತೇಜಸ್ ಅವರು ವಿವಿಧ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.
ಕಲಾ ಪ್ರೇಮಿಗಳು ಹಾಗೂ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಂಗಪ್ರಯೋಗಕ್ಕೆ ಪ್ರೋತ್ಸಾಹ ನೀಡುವಂತೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ ಮನವಿ ಮಾಡಿದ್ದಾರೆ.
