ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
02-12-2025
"ರಾಜಕೀಯ ಬ್ರೇಕ್: ಸಿದ್ದರಾಮಯ್ಯ ಡಿಕೆ ಮನೆಯಲ್ಲಿ ಉಪಹಾರ
ಡಿಸಿಎಮ್ ಡಿಕೆ ಶಿವಕುಮಾರ ಮನೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉಪಹಾರ ಕೂಟಕ್ಕೆ ಆಗಮಿಸಿ ನಾಟಿಕೋಳಿ ಸ್ಪೇಷಲ್ ಖಾದ್ಯದ ಬ್ರೇಕ್ ಫಾಸ್ಟ್ ಸವಿದರು. ಈ ಮೂಲಕ ರಾಜ್ಯ ರಾಜಕೀಯ ಸಿಮ್ ಗದ್ದುಗೆ ಜಟಾಪಟಿಗೆ ಸದ್ಯ ಬ್ರೇಕ್ ಬಿದ್ದಂತಾಗಿದೆ. ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವಿಶೇಷ ಆತಿಥ್ಯ ನೀಡಲಾಯಿತು.
ಇಂದು ಬೆಳಿಗ್ಗೆ ಸದಾಶಿವನಗದಲ್ಲಿರುವ ಡಿಸಿಎಮ್ ಡಿಕೆಶಿಯವರ ಸರ್ಕಾರಿ ಬಂಗಲೆಯಲ್ಲಿ ವಿವಿಧ ಬಗೆಯ ಉಪಹಾರ ತಯಾರಾಗಿತ್ತು. ಇದು ಸಿಎಮ್ , ಡಿಸಿಎಮ್ ನಡುವಿನ ಬಾಂಧವ್ಯಕ್ಕಿಂತ ಹೈಕಮಾಂಡ್ ನೀಡಿರುವ ಖಡಕ್ ಸೂಚನೆಯ ಆದೇಶವಾಗಿದೆ ಎಂದ ಹೇಳಲಾಗುತ್ತಿದೆ. ಇದೀಗ ರಾಜ್ಯ ರಾಜಕೀಯದಲ್ಲಿ ಬೀಸುತ್ತಿರುವ ಗಾಳಿ ತಂಗಾಳಿಯಾಗಿ ಇಲ್ಲ ಬಿರುಗಾಳಿಯಾಗಿ ಬೀಸುವ ಸಾಧ್ಯತೆ ದಟ್ಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಯಾಗಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಸಿಎಮ್ ಆಗಿ ಸಿದ್ಧರಾಮಯ್ಯ ಎರಡುವರೆ ವರ್ಷ ಪೂರೈಸಿದ ಹಿನ್ಬಲೆಯಲ್ಲಿ ,ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ತಮಗೆ ಸಿಎಮ್ ಸ್ಥಾನ ನೀಡಬೇಕೆಂದು ಡಿಕೆ ಶಿವಕುಮಾರ ಆಗ್ರಹಿಸಿದ್ದರು. ಸಿಎಮ್ ಗದ್ದುಗೆ ಏರಬೇಕೆಂಬ ಬಹು ವರ್ಷದ ಕನಸನ್ನ ನನಸಾಗಿಸಿಕೊಳ್ಳಬೇಕೆಂಬ ನಿಲುವು ಉಪಮುಖ್ಯಮಂತ್ರಿ ಡಿಕೆಶಿವಕುಮಾರ ಅವರದ್ದಾಗಿತ್ತು. ಆದರೆ ಸಾಗುವ ಹಾದಿಯಲ್ಲಿ ಈಗ ನೂರೆಂಟು ವಿಘ್ನ ಕಾಡುತ್ತಿತುವ ಹಿನ್ನಲೆಯಲ್ಲಿ ಟೆಂಪಲ್ ರನ್ ಮೊರೆ ಹೋಗಿದ್ದಾರೆ.
ಸಿಎಮ್ ಸಿದ್ಧರಾಮಯ್ಯ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಈಗ ಹೊಸದೊಂದು ಮೈಲಿಗಲ್ಲು ಸಾಧಿಸಲಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ 2792 ದಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ದಾಖಲೆ ಇದೆ. ಈಗ ಆ ದಾಖಲೆಯನ್ನು ಸಿಎಮ್ ಸಿದ್ಧರಾಮಯ್ಯ ಬರುವ ಜನವರಿ 5 ರಂದು ಅಳಿಸಿಹಾಕಲಿದ್ದಾರೆ. ದಾಖಲೆ ಸರಿಗಟ್ಟುವ ಈ ಸಮಯದಲ್ಲಿ ಹೈರಾಣಾಗಿರುವ ಹೈಕಮಾಂಡ್ ಸಿಎಮ್ ಗದ್ದುಗೆ ಕಾದಾಟಕ್ಕೆ ಬ್ರೆಕ್ ಫಾಸ್ಟ್ ನೆಪದಲ್ಲಿ ಸದ್ಯ ಬ್ರೆಕ್ ಹಾಕುವ ತಂತ್ರ ಅನುಸರಿಸಿದೆ
ಕೈ ಪಾಳಯಲ್ಲಿ ಆಂತರಿಕ ಬೇಗುದಿ ಬುಗಿಲೆದ್ದಿದೆ. ಕೇವಲ ನಾಯಕದ್ವಯರ ನಡುವಿನ ಗದ್ದುಗೆ ಕಿತ್ತಾಟ ಮಾತ್ರವಲ್ಲ ಆ ನಾಯಕರ ಬೆಂಬಲಿಗರಿಗೂ ಡವಡವ ಶುರುವಾಗಿದೆ. ಡಿಸಿಎಮ್ ಡಿಕೆಶಿ ಅವರ ಬಹುನಿರೀಕ್ಷಿತ ಕನಸು ಸಿಮ್ ಗಾದಿಗೆ ಮತ್ತೆ ಅಪಸ್ವರ ಕೇಳಿಬರುತ್ತಿದೆ. ಅವರನ್ ಬಿಟ್ ಇವರನ್ನ ಬಿಟ್ ಇಲ್ಯಾರು? ಎಂಬಂತ ಸ್ಥಿತಿ ಎದುರಾಗಿದ್ದು, ಇತ್ತ ಗೃಹಸಚಿವ ಜಿ. ಪರಮೇಶ್ವರ್ ತಾವೂ ಸಹ ಸಿಎಮ್ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ ಅವರಿಗೆ ಮೊಸರಲ್ಲೂ ಕಲ್ಲು ಸಿಕ್ಕಂತಾಗಿದ್ದು ಹೈಕಮಾಂಡ್ ಮುಂದೆ ತಮ್ಮ ಬಣದ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದಾನುವೇಳೆ ಗೃಹಮಂತ್ರಿಗಳು ತಾವು ಸಿಎಮ್ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಪಟ್ಟು ಹಿಡಿದರೆ ಮತ್ತೆ ರಾಜ್ಯ ರಾಜಕೀಯದ ವಿದ್ಯಮಾನ ಬೇರೆಯೇ ಆಗಲಿದ್ದು, ದಲಿತ ಮುಖ್ಯಮಂತ್ರಿಯಾಗಬೇಕೆಂಬ ಕೂಗು ದಟ್ಟವಾಗಿ ಕೇಳಿಬಂದರೆ ಉಪಮುಖ್ಯಮಂತ್ರಿಗಳ ಮುಂದಿನ ಹೆಜ್ಹೆ ಏನೆಂಬುದು ಕಾದುನೋಡಬೇಕಿದೆ.
