ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
05-04-2025
ಪಾಂಡ್ಯ ಪಡೆಗೆ ಲಗಾಮು ಹಾಕಿದ ಲಕ್ನೋ: ಸೂಪರ್ ಜೈಂಟ್ಸ್‌ಗೆ 12 ರನ್‌ಗಳ ರೋಚಕ ಜಯ!
ಲಕ್ನೋ: ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ 12 ರನ್ ಗಳ ವಿರೋಚಿತ ಜಯ ದಾಖಲಿಸಿದೆ.
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ ಇಬ್ಬರೂ ಅರ್ಧಶತಕಗಳನ್ನು ಗಳಿಸಿ ತಮ್ಮ ತಂಡ ದೊಡ್ಡ ಮೊತ್ತವನ್ನು ತಲುಪಲು ಸಹಾಯ ಮಾಡಿದರು.
ಆರಂಭಿಕರಾದ ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 60 ರನ್ ಸಿಡಿಸಿದರೆ, ಏಡೆನ್ ಮರ್ಕ್ರಮ 38 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 53 ರನ್ ಸಿಡಿಸಿದರು. ಬಳಿಕ, ಆಯುಶ್ ಬದೋನಿ 19 ಎಸೆತಗಳಲ್ಲಿ 30 ಮತ್ತು ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ 27 ರನ್ ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು. ಅಂತಿಮವಾಗಿ 20 ಓವರ್‌ಗಳ ಅಂತ್ಯಕ್ಕೆ ಲಖನೌ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.
ಲಕ್ನೋ ನೀಡಿದ 204 ರನ್ ಗಳ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಂಬೈ ಪರ ನಮನ್ ಧಿರ್ 46 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 67 ರನ್ ಗಳಿಸಿದರು. 25 ರನ್ ಗಳಿಸಿದ್ದ ತಿಲಕ್ ವರ್ಮಾ ಗಾಯದ ಸಮಸ್ಯೆಗೆ ತುತ್ತಾಗಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯಾ (28 ರನ್) ಗೆಲುವಿಗೆ ಪ್ರಯತ್ನಿಸಿದರಾದರೂ ಗೆಲುವಿನ ರನ್ ಗಳಿಸಲಾಗಲಿಲ್ಲ. ಅಂತಿಮವಾಗಿ ಮುಂಬೈ 12 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
