ವರದಿಗಾರರು :
ಮಹೇಶ್ ಕುಮಾರ್ ಬಳ್ಳಾರಿ ||
ಸ್ಥಳ :
ಸಂಡನೂರು
ವರದಿ ದಿನಾಂಕ :
14-11-2025
“ಸಂಡೂರು ತೋರಣಗಲ್ಲಿನಲ್ಲಿ ನಕಲಿ ವೈದ್ಯನ ಬಯಲು: ಅಭಿಲಾಷ್ ಕ್ಲಿನಿಕ್ ಸೀಜ್”
ಸಂಡೂರು, ತೋರಣಗಲ್ಲು: ವೈದ್ಯಕೀಯ ಪದವಿ ಪಡೆಯದೇ ಸುಳ್ಳುವಾಗಿ ವೈದ್ಯನೆಂದು ಬಿಂಬಿಸಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಬಿ.ಎನ್. ವೀರೇಶ್ ಎಂಬವನ ಕ್ಲಿನಿಕ್‌ನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ ಘಟನೆ ತೋರಣಗಲ್ಲು ಗ್ರಾಮದಲ್ಲಿ ನಡೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.
ಮೂಲತಃ ಕೇವಲ 10ನೇ ತರಗತಿ ವಿದ್ಯಾಭ್ಯಾಸ ಹೊಂದಿರುವ ವೀರೇಶ್, ಔಷಧಿಗಳ ಬಗ್ಗೆ ಮೂಲಭೂತ ಮಾಹಿತಿ ಪಡೆದು ‘ವೈದ್ಯ’ ಎಂಬ ಹೆಸರಿನಲ್ಲಿ ಅಭಿಲಾಷ್ ಕ್ಲಿನಿಕ್‌ನ್ನು ನಡೆಸುತ್ತಿದ್ದನು. ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಇಲಾಖೆಯು ತಕ್ಷಣ ಕ್ರಮಕ್ಕೆ ಮುಂದಾಯಿತು.
ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದ ಮೇರೆಗೆ, ಸಂಡೂರು ತಾಲ್ಲೂಕು ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಭರತ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಕ್ಲಿನಿಕ್‌ನ್ನು ಸೀಜ್ ಮಾಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಲಿದೆ ಎಂದು ತಿಳಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಮುಖ್ಯ ಸಂದೇಶ ನೀಡಿ, “ಸೂಕ್ತ ವೈದ್ಯಕೀಯ ಪದವಿ ಹೊಂದಿದ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯಿರಿ. ನಕಲಿ ವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಗಂಭೀರ ಪರಿಣಾಮ ಉಂಟುಮಾಡಬಹುದು” ಎಂದು ಎಚ್ಚರಿಕೆ ನೀಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯ ವೃತ್ತಿ ಕಂಡುಬಂದಲ್ಲಿ, ಅವರ ಶಿಕ್ಷಣ, ಪದವಿ ಮತ್ತು ನೋಂದಣಿ ಪರಿಶೀಲಿಸಿ, ಅನುಮಾನಾಸ್ಪದವರ ವಿರುದ್ಧ ತಕ್ಷಣ ದೂರು ನೀಡುವಂತೆ ಇಲಾಖೆ ಜನತೆಗೆ ಮನವಿ ಮಾಡಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಪ್ರಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ದಾಳಿ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಂಡೆಗೌಡ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ನಿಜಾಮುದ್ದೀನ್ ಹಾಜರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
