ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
24-03-2025
ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಯುವಕರು |
ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೀರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ದಿನಕ್ಕೆ ಸೂರ್ಯನ ಪ್ರಕರತೆ ಹೆಚ್ಚಾಗುತ್ತಿದ್ದು ಪ್ರಾಣಿ, ಪಕ್ಷಿಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ. ಈ ಬಿಸಿಲಿನ ತಾಪ ಜನರಿಗಷ್ಟೇ ಅಲ್ಲದೇ, ಮೂಕ ಪ್ರಾಣಿ ಪಕ್ಷಿಗಳಿಗೂ ತಟ್ಟುತ್ತಿದೆ. ಕೆರೆಗಳು ಬತ್ತುತ್ತಿದ್ದು, ಕಾಡು ಪ್ರಾಣಿಗಳು ಮತ್ತು ಪಕ್ಷೀಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಇದನ್ನು ಅರಿತ ಬೀದರ್ ಪಟ್ಟಣದ ಸ್ವಾಭಿಮಾನಿ ಗೆಳೆಯರ ಬಳಗದ ಯುವಕರು ಅರಣ್ಯ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಸಿಮೆಂಟ್ ತೊಟ್ಟಿಯನ್ನ ನಿರ್ಮಾಣ ಮಾಡಿ ಪಕ್ಷಿಗಳಿಗೆ ನೀರು ಹಾಕುತ್ತಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಈ ಯುವಕರು ಅರಣ್ಯದಲ್ಲಿ ತೊಟ್ಟಿಯನ್ನ ನಿರ್ಮಾಣ ಮಾಡಿ ಅಲ್ಲಿಗೆ ಪ್ರತಿದಿನವೂ ನೀರು ತಂದು ಹಾಕುತ್ತಿದ್ದಾರೆ. ಇದು ಕಾಡು ಪ್ರಾಣಿಗಳಿಗೆ ದಾಹ ಇಂಗಿಸಿಕೊಳ್ಳಲು ಅನುಕೂಲವಾಗಿದ್ದು ಗುಬ್ಬಿ, ಅಳಿಲು, ಕಾಗೆ ಹೀಗೆ ಅನೇಕ ಪಕ್ಷಿಗಳು ಇಲ್ಲಿಗೆ ಬಂದು ನೀರು ಕುಡಿದು, ಆಹಾರ ಸೇವಿಸಿ ಹೋಗುತ್ತಿವೆ ಎಂದು ಸ್ವಾಭಿಮಾನಿ ಗೆಳೆಯರ ಬಳಗದವರು ಹೇಳಿದ್ದಾರೆ.
