ವರದಿಗಾರರು :
ಮಹೇಶ್ ಕುಮಾರ್, ||
ಸ್ಥಳ :
ಬಳ್ಳಾರಿ
ವರದಿ ದಿನಾಂಕ :
14-11-2025
ಬಳ್ಳಾರಿ ಮೇಯರ್–ಉಪಮೇಯರ್ ಚುನಾವಣೆ: ನಗರ ಪಾಲಿಕೆ ಸುತ್ತ 500 ಮೀ. ಪ್ರದೇಶಕ್ಕೆ ನಿಷೇಧಾಜ್ಞೆ
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳಿಗೆ ನವೆಂಬರ್ 15 ರಂದು ನಡೆಯುವ ಚುನಾವಣೆಯನ್ನು ಹಿನ್ನೆಲೆಯಲ್ಲಿ ನಗರ ಪಾಲಿಕೆ ಸುತ್ತಲಿನ 500 ಮೀಟರ್ ವ್ಯಾಪ್ತಿಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶ ಹೊರಡಿಸಿದ್ದಾರೆ.
ಚುನಾವಣೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ, ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಿ ಶಾಂತಿ–ಭದ್ರತೆ ಕಾಪಾಡುವ ಉದ್ದೇಶದಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಪ್ರಕಾರ ಈ ನಿಷೇಧಾಜ್ಞೆ ಜಾರಿಗೊಂಡಿದೆ.
ನಿಷೇಧಿತ ಚಟುವಟಿಕೆಗಳು ಮಸಿ, ನೀರು, ಬೆಂಕಿ ಪೊಟ್ಟಣ, ಲೈಟರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಹೊತ್ತು ತರುವುದು. ಶಸ್ತ್ರಾಸ್ತ್ರ, ಬಡಿಗೆ, ಬರ್ಚಿಗದೆ, ಚಾಕು, ಕೋಲು, ಲಾಠಿ ಹಾಗೂ ದೇಹಕ್ಕೆ ಹಾನಿ ಮಾಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದು. ಸ್ಫೋಟಕ ವಸ್ತುಗಳು, ಪಟಾಕಿ ಸಿಡಿಸುವುದು ಅಥವಾ ನಾಶಕಾರಿ ವಸ್ತುಗಳನ್ನು ಹೊತ್ತು ತರುವುದು. ಕಲ್ಲು ಎಸೆಯುವ ಸಲಕರಣೆಗಳು ಅಥವಾ ಬಾಣಸಿಡಿತ ಸಾಧನಗಳನ್ನು ಬಳಸುವುದು. ಕಾರು, ಬೈಕ್ ಸೇರಿದಂತೆ ಯಾವುದೇ ವಾಹನಗಳಲ್ಲಿ ರ್ಯಾಲಿ ಆಯೋಜಿಸುವುದು. ವಿಜಯೋತ್ಸವ, ಮೆರವಣಿಗೆ, ಭೋಜನ ಕೂಟಗಳನ್ನು ಮಾಡುವುದು. ಐದು ಜನಕ್ಕಿಂತ ಹೆಚ್ಚು ಜನರು ಗುಂಪು ಕೂಡಿಕೊಳ್ಳುವುದು (ನಗರ ಪಾಲಿಕೆ ಸಿಬ್ಬಂದಿ ಮತ್ತು ಸದಸ್ಯರನ್ನು ಹೊರತುಪಡಿಸಿ). ಘೋಷಣೆ ಕೂಗುವುದು, ಪದ ಹಾಕುವುದು, ವಾದ್ಯ ಬಾರಿಸುವುದು ಹಾಗೂ ಸಾರ್ವಜನಿಕ ಪ್ರದರ್ಶನ ನಡೆಸುವುದು. ಅಸಭ್ಯತೆ, ಸುವ್ಯವಸ್ಥೆಯನ್ನು ಭಂಗಪಡಿಸುವ ಸಾಧ್ಯತೆ ಇರುವ ಯಾವುದೇ ಪ್ರದರ್ಶನ, ಪ್ರಕಟಣೆ, ಅಥವಾ ಪ್ರಸಾರ. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ನಿಷೇಧಾಜ್ಞೆ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
