ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
12-03-2025
ಕಳೆದ 1 ವರ್ಷದಲ್ಲಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅತಿಹೆಚ್ಚು ಸೀಜ್ ಆದ ವಸ್ತು ಯಾವುದು?
ಉದ್ಯಾನನಗರಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಸಿಕ್ಕಿಬಿದ್ದಿದ್ದು ಕೋಲಾಹಲಕ್ಕೆ ಕಾರಣವಾಗಿದೆ. ಇದರ ನಡುವೆ ಏರ್‌ಪೋರ್ಟ್ ಸೆಕ್ಯುರಿಟಿ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿದೆ. ಹಾಗಿದ್ದರೆ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ 2024ರ ಜನವರಿಯಿಂದ 2025ರ ಜನವರಿಯವರೆಗೆ ಅತಿಹೆಚ್ಚು ಸೀಜ್ ಆದ ವಸ್ತುಗಳು ಯಾವುದು ಅನ್ನೋದರ ಡೀಟೇಲ್ಸ್ ಇಲ್ಲಿದೆ. ಚೆಕ್ ಇನ್ ಲಗೇಜ್ ಹಾಗೂ ಹ್ಯಾಂಡ್ ಬ್ಯಾಗೇಜ್‌ಗಳಿಂದ ಸೀಜ್ ಮಾಡಲಾದ ವಸ್ತುಗಳ ಪಟ್ಟಿ ಇಲ್ಲಿದೆ. ಹೆಚ್ಚಿನವರಿಗೆ ಮೊಬೈಲ್ ಚಾರ್ಜಿಂಗ್‌ಗೆ ದೊಡ್ಡ ಸಮಸ್ಯೆ. ಮೊಬೈಲ್ ಇಲ್ಲದೆ ಯಾವ ಕಾರ್ಯ ಕೂಡ ನಡೆಯದ ಕಾರಣ ಹೆಚ್ಚಿನವರು ಪವರ್ ಬ್ಯಾಂಕ್‌ಅನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ, ಏರ್‌ಪೋರ್ಟ್‌ನಲ್ಲಿ ಸೀಜ್ ಆದ ಹೆಚ್ಚಿನ ವಸ್ತುಗಳು ಪವರ್ ಬ್ಯಾಂಕ್‌ಗಳಾಗಿವೆ.
ಕೆಂಪೇಗೌಡ ಏರ್‌ಪೋರ್ಟ್‌ನ ಸೆಕ್ಯುರಿಟಿ ಡೇಟಾ ಪ್ರಕಾರ, ಕಳೆದ ವರ್ಷದ ಜನವರಿಯಿಂದ ಈ ವರ್ಷದ ಫೆಬ್ರವರಿಯವರೆಗೆ 1412 ಕೆಜಿ ಪವರ್ ಬ್ಯಾಂಕ್‌ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ಲೈಟರ್‌ಗಳಿವೆ. 556 ಕೆಜಿ ಲೈಟರ್‌ಗಳನ್ನು ಸೀಜ್ ಮಾಡಲಾಗಿದ್ದರೆ, 576 ಕೆಜಿ ಇ ಸಿಗರೇಟ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕ್ಯಾಬಿನ್ ಬ್ಯಾಗೇಜ್‌ಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಅನುಮತಿಸಲಾಗಿದೆ. ಚೆಕ್-ಇನ್ ಬ್ಯಾಗ್‌ಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ನಿಷೇಧಿಸಲು ಪ್ರಾಥಮಿಕ ಕಾರಣವೆಂದರೆ ಅವುಗಳಲ್ಲಿರುವ ಅಂಶಗಳಾದ ಲಿಥಿಯಂ ಅಯಾನ್ ಬ್ಯಾಟರಿಗಳು, ಇವು ಅಪಾಯಕಾರಿ ಮತ್ತು ಹೆಚ್ಚು ಬಿಸಿಯಾದಾಗ ಬೆಂಕಿ ಮತ್ತು ಸ್ಫೋಟಗಳಿಗೆ ಕಾರಣವಾಗುತ್ತದೆ.
ಅಪಾಯಕಾರಿ ಸರಕುಗಳ ನಿಯಮಗಳ ಪ್ರಕಾರ, ಕ್ಯಾಬಿನ್ ಬ್ಯಾಗೇಜ್‌ನಲ್ಲಿ ಲಿಥಿಯಂ ಲೋಹ ಅಥವಾ ಲಿಥಿಯಂ ಅಯಾನ್ ಸೆಲ್ ಅಥವಾ ಬ್ಯಾಟರಿಗಳನ್ನು ಹೊಂದಿರುವ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳನ್ನು (PED) ಸಾಗಿಸಬಹುದು ಮತ್ತು ಪ್ರತಿ ವ್ಯಕ್ತಿಯು 15 PED ಗಳನ್ನು ಮಾತ್ರ ಸಾಗಿಸಬಹುದು. ಲಿಥಿಯಂ ಅಯಾನ್ ಬ್ಯಾಟರಿಗಳ ಸಂದರ್ಭದಲ್ಲಿ, ಪೋರ್ಟಬಲ್ ಸಾಧನಗಳು 100Wh-ಗಂಟೆಯ ಸಾಮರ್ಥ್ಯಕ್ಕಿಂತ ಹೆಚ್ಚಿರಬಾರದು. ಆದಾಗ್ಯೂ, 160 Wh ಗಿಂತ ಹೆಚ್ಚಿನ ವಿಶೇಷ ಪವರ್ ಬ್ಯಾಂಕ್‌ಗಳಿವೆ ಮತ್ತು ಅವುಗಳನ್ನು ವಿಮಾನಯಾನ ಸಂಸ್ಥೆಯಿಂದ ವಿಶೇಷ ಅನುಮತಿಯ ಮೇರೆಗೆ ಸಾಗಿಸಬಹುದು.
