ವರದಿಗಾರರು :
ನಾ. ಅಶ್ವಥ್ ಕುಮಾರ್, ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
29-11-2025
ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ಸವಾರಿ ಮಾಡುವರು : ಕೆ. ಶಿವಕುಮಾರ್
ಚಾಮರಾಜನಗರ : “ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ನಿಮ್ಮ ಮೇಲೆಯೇ ಸವಾರಿ ಮಾಡುವರು,” ಎಂದು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಎಚ್ಚರಿಸಿದರು. ಚಾಮರಾಜನಗರ ಜೋಡಿ ರಸ್ತೆಯ ವರ್ತಕರ ಭವನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ ಎಂದು ಅವರು ಹೇಳಿದ್ದಾರೆ. ಪತ್ರಕರ್ತರಿಗೆ ಸರ್ಕಾರ ನೀಡಿರುವ ವಿವಿಧ ಸೌಲಭ್ಯಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೆಲ ಅಧಿಕಾರಿಗಳು ಕಠಿಣ ಷರತ್ತುಗಳ ಹೆಸರಿನಲ್ಲಿ ಕಡಿವಾಣ ಹಾಕಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪತ್ರಕರ್ತರಿಗೆ ಸೌಲಭ್ಯ ಕತ್ತರಿಸುವುದು ಅನ್ಯಾಯ ರಾಜ್ಯ ಸರ್ಕಾರ ಮಾನ್ಯತೆ ಪಡೆದ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ಸಂಜೀವಿನಿ ಯೋಜನೆ, ಮಾಸಾಸನ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. “ಆದರೆ, ಲಕ್ಷಾಂತರ ಸಂಬಳ ಪಡೆದುಕೊಳ್ಳುವ ಅಧಿಕಾರಿಗಳಿಗೆ ಪಿಂಚಣಿ ಬೇಕಂತೆ; ಆದರೆ 40 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಪತ್ರಕರ್ತರಿಗೆ ಪಿಂಚಣಿ ಕೊಡಲ್ಲವೆನ್ನುವುದು ಯಾವ ನ್ಯಾಯ?” ಎಂದು ಪ್ರಶ್ನಿಸಿದ ಅವರು, ಮುಂದಿನ ವಿಧಾನ ಪರಿಷತ್ ಅಧಿವೇಶನದಲ್ಲೇ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸುವುದಾಗಿ ಹೇಳಿದರು.
ಎನ್‌ಸಿ, ಎಸ್‌ಟಿ, ಓಬಿಸಿ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತು ಬೇಕು ವಾರ್ತಾ ಇಲಾಖೆಯ ಹೊಸ ಜಾಹೀರಾತು ನೀತಿಯಲ್ಲಿ ಹಿಂದುಳಿದ ವರ್ಗದ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತು ನೀಡುವಂತೆ ತಾವು ಒತ್ತಾಯಿಸಿದ್ದೇವೆ ಎಂದು ಹೇಳಿದರು. “ಜಾಹೀರಾತಿಲ್ಲದೆ ಪತ್ರಿಕೆಗಳನ್ನು ನಡೆಸುವುದು ಕಷ್ಟ. ಪತ್ರಕರ್ತರಿಗೆ ನ್ಯಾಯಸಮ್ಮತ ವೇತನ ಸಿಗಬೇಕು,” ಎಂದು ತಿಳಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 25 ಸಾವಿರ ಚಾಮರಾಜನಗರ ಜಿಲ್ಲೆಯ ಪತ್ರಕರ್ತರಿಗೆ ಪ್ರಶಸ್ತಿ ದೊರೆಯದಿರುವ ಬಗ್ಗೆ ಉಲ್ಲೇಖಿಸಿದ ಅವರು, ಮುಂದಿನ ಬಾರಿ ಪ್ರಶಸ್ತಿ ಪಡೆಯುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ, ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಒಳ್ಳೆಯ ಕ್ರಮವಾಗಿದ್ದು, ವೈಯಕ್ತಿಕವಾಗಿ 25 ಸಾವಿರ ರೂ. ನೆರವು ನೀಡುವುದಾಗಿ ಘೋಷಿಸಿದರು. ಪತ್ರಕರ್ತರು ಹಾಗೂ ಅವರ ಕುಟುಂಬಗಳಿಗಾಗಿ ಸಮರ್ಪಕ ಆರೋಗ್ಯ ಭದ್ರತೆ ಇರಬೇಕೆಂದು ಅವರು ಸಲಹೆ ನೀಡಿದರು. ಯಾವುದೇ ಪತ್ರಕರ್ತರಿಗೆ 3 ಲಕ್ಷ ರೂ.ವರೆಗಿನ ಹೆಚ್ಚಿನ ಚಿಕಿತ್ಸಾ ವೆಚ್ಚ ಬಿದ್ದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸುವಂತೆ ತಾವು ಗಮನ ಹರಿಸುವುದಾಗಿ ಹೇಳಿದರು.
ಪತ್ರಿಕಾರಂಗ ಸಮಾಜದ ಕಣ್ಣೆರೆಸೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ, “ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗ. ಸಮಾಜ ಮತ್ತು ಸರ್ಕಾರವನ್ನು ಕಣ್ಣೆರೆಸುವ ಅಸ್ತ್ರ,” ಎಂದು ಪ್ರಶಂಸಿಸಿದರು. ಟಿವಿ ಮಾಧ್ಯಮಗಳಲ್ಲಿ ತಪ್ಪು ಸುದ್ದಿಗಳು ಹರಿದಾಡುತ್ತಿದ್ದರೂ, ಪತ್ರಿಕೆಗಳು ನಿಖರವಾದ ಮಾಹಿತಿ ನೀಡುತ್ತವೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಂಶಿಪ್ರಸನ್ನಕುಮಾರ್, ಶಾಸಕ ಗಣೇಶ್ ಪ್ರಸಾದ್, ಸಂಘದ ಪ್ರಧಾನ ಕಾರ್ಯದರ್ಶಿ ಕೆರಗೋಡು ಸೋಮಶೇಖರ್, ಟೆಲೆಕ್ ರವಿಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆ. ಶಿವಕುಮಾರ್ ಅವರನ್ನು ಕನ್ನಡಪ್ರಭ ಮೈಸೂರು ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನಕುಮಾರ್ ಸನ್ಮಾನಿಸಿದರು. ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು 2025-28ನೇ ಸಾಲಿನ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅರ್.ಎನ್. ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಕೂರು ಪ್ರಸಾದ್ ಅಧಿಕಾರ ಸ್ವೀಕರಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ದೇವರಾಜ ಕಪ್ಪಸೋಗೆ ಹಾಗೂ ಹಲವಾರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
