ವರದಿಗಾರರು :
ಶರಣ ಬಸವ. ||
ಸ್ಥಳ :
ಗಂಗಾವತಿ
ವರದಿ ದಿನಾಂಕ :
22-10-2025
ವಾಲ್ಮೀಕಿ ನಗರದಲ್ಲಿ ಮಳೆಯಿಂದ ರಸ್ತೆ ಜಲಾವೃತ: ಕೌನ್ಸಿಲರ್ ವಿರುದ್ಧ ನಿವಾಸಿಗಳ ಆಕ್ರೋಶ
ಗಂಗಾವತಿ (ಕೊಪ್ಪಳ ಜಿಲ್ಲೆ): ಇಂದಿನ ಧಾರಾಕಾರ ಮಳೆಯಿಂದಾಗಿ ಗಂಗಾವತಿ ಪಟ್ಟಣದ ಗುಡ್ಡ ಪ್ರದೇಶದ ಸಮೀಪದಲ್ಲಿರುವ ವಾಲ್ಮೀಕಿ ನಗರ ಸಂಪೂರ್ಣ ಜಲಾವೃತಗೊಂಡಿದ್ದು, ಸ್ಥಳೀಯರು ಕೌನ್ಸಿಲರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಗರದ ಬಹುತೇಕ ರಸ್ತೆಗಳು ಮಳೆ ನೀರಿನಲ್ಲಿ ಮುಳುಗಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡು ಸಂಖ್ಯೆ 03ರ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದ ರಸ್ತೆಗಳ ಸ್ಥಿತಿ ನಿರಂತರವಾಗಿ ಕುಸಿಯುತ್ತಾ ಬಂದಿರುವುದು, ಸ್ಥಳೀಯ ಆಡಳಿತದ ನಿರ್ಲಕ್ಷತೆಯನ್ನು ಬಹಿರಂಗಪಡಿಸುತ್ತಿದೆ.
"ನಮ್ಮ ಏರಿಯಾದ ಸಮಸ್ಯೆಗಳನ್ನು ಎಷ್ಟೋ ಬಾರಿ ಕೌನ್ಸಿಲರ್ ಅಮರೇಗೌಡ ಅವರ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಅವರು ಇಲ್ಲಿಗೆ ಬಂದು ಸಮಸ್ಯೆ ಪರಿಶೀಲಿಸಿದ ದಿನವೇ ಇಲ್ಲ," ಎಂದು ನಿವಾಸಿ ಯಮನೂರ ಹಾಗೂ ಯುವಕರು ಮಾಧ್ಯಮದ ಮುಂದೆ ತಮ್ಮ ಅಳಲನ್ನು ಹಂಚಿಕೊಂಡರು.
ನಿವಾಸಿಗಳ ಆಗ್ರಹ:
ರಸ್ತೆಗಳಿಂದ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು.
ಸಮರ್ಪಕ ಡ್ರೈನೇಜ್ ವ್ಯವಸ್ಥೆ ರೂಪಿಸಬೇಕು.
ಪರಿಸರ ಸ್ವಚ್ಛತೆಗೆ ಗಮನಹರಿಸಬೇಕು.
ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಒದಗಿಸಬೇಕು.
"ಇದ್ರಲ್ಲವೂ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ," ಎಂದು ಯಮನೂರ ನಾಯಕ ಮಾಧ್ಯಮದ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.
ವಾಲ್ಮೀಕಿ ನಗರದಲ್ಲಿ ಈ ಸಮಸ್ಯೆ ಹಿಂದೆಂದೂ ಸರಿಯಾಗಿ ಪರಿಹಾರಗೊಂಡಿಲ್ಲವೆಂಬುದನ್ನು ಗಮನಿಸಿದರೆ, ಈ ಬಾರಿ ನಿವಾಸಿಗಳ ತೀವ್ರ ಅಕ್ರೋಶ ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಸ್ಥಳೀಯ ಆಡಳಿತ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಸ್ಪಷ್ಟವಾಗಿದೆ.
