ವರದಿಗಾರರು :
ಕೆ ಜಿ ಸುರೇಶ ||
ಸ್ಥಳ :
ಹಾಸನ
ವರದಿ ದಿನಾಂಕ :
29-11-2025
ನಾಯಕತ್ವ ಚರ್ಚೆ ಅನಗತ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ
ಹಾಸನ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳು ವಾಸ್ತವಕ್ಕಿಂತ ಹೆಚ್ಚು ಅತಿಶಯೋಕ್ತಿಯಾಗಿದೆ, ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಹಾಸನ ನಗರದಲ್ಲಿ ಮುಖ್ಯಮಂತ್ರಿಗಳ ಭೇಟಿ ವ್ಯವಸ್ಥೆ ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾತನಾಡಿದರು. “ನನಗೆ ಈಗ ಕೆಲಸ ತುಂಬಾ ಕೊಟ್ಟಿದ್ದಾರೆ; ಅದನ್ನೇ ನಾನು ಮಾಡುತ್ತೇನೆ. ಹೊಟ್ಟೆಗೆ ಹಿಟ್ಟು ಇಲ್ಲದೆ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಜನರಿಗೆ ಪ್ರಯೋಜನವಿಲ್ಲದ ಚರ್ಚೆಗಳಲ್ಲಿ ನಾನು ಭಾಗವಹಿಸುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು. ಮಠಾಧೀಶರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ವಿಷಯಕ್ಕೆ ಅತಿರೇಕದ ಉತ್ಪ್ರೇಕ್ಷೆ ನೀಡುವ ಅವಶ್ಯಕತೆ ಇಲ್ಲ. ಚರ್ಚೆಗೆ ಮಿತಿ ಇರಬೇಕು,” ಎಂದರು.
ಬೆಳೆ ಪರಿಹಾರ—ಕೇಂದ್ರದಿಂದ ನೆರವಿಗೆ ನಿರೀಕ್ಷೆ ರಾಜ್ಯ ಸರ್ಕಾರ ಈಗಾಗಲೇ ₹2251 ಕೋಟಿ ಬೆಳೆ ಪರಿಹಾರವನ್ನು ರೈತರಿಗೆ ವಿತರಿಸಿದೆ ಎಂದು ಸಚಿವರು ತಿಳಿಸಿದರು. ಅತಿವೃಷ್ಟಿಯಿಂದ ಹಾನಿಯಾದ ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರದಿಂದ ₹1521 ಕೋಟಿ ನೆರವು ಕೋರಿ ಮನವಿ ಸಲ್ಲಿಸಲಾಗಿದೆ. “ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಿರುವುದರಿಂದ ರಾಜ್ಯಕ್ಕೆ ನ್ಯಾಯ ದೊರಕಬೇಕೆಂಬ ಭರವಸೆ ಜನತೆಗೆ ನೀಡಬೇಕು,” ಎಂದು ಅವರು ಒತ್ತಾಯಿಸಿದರು. ಎಂಎಸ್‌ಪಿ ಕುರಿತು ಮಾತನಾಡಿದ ಅವರು, “ಕೇಂದ್ರ ಸರ್ಕಾರ ಘೋಷಣೆ ಮಾಡಿದರೂ ಬೆಂಬಲ ಬೆಲೆ ಜಾರಿ ಮಾಡಲು ವಿಫಲವಾಗಿದೆ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ ಸಂಸದರು ಮೌನವಾಗಿದ್ದಾರೆ,” ಎಂದು ಟೀಕಿಸಿದರು
ಹಾಸನ ಜಿಲ್ಲೆಯಲ್ಲಿ ದಾಖಲೆ ಮಟ್ಟದ ಜಮೀನು ಸರ್ವೆ ಹಾಸನದಲ್ಲಿ 15,000 ಜಮೀನುಗಳ ಅಳತೆ ಪೂರ್ಣಗೊಂಡಿದ್ದು, 24,000 ರೈತರಿಗೆ ಪೋಡಿ ಮತ್ತು ಹಕ್ಕುಪತ್ರ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿ ಇದೆ. “ಕಳೆದ 14 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೇವಲ 2,444 ಜಮೀನುಗಳಿಗೆ ಮಾತ್ರ ಸರ್ವೆ ನಡೆಸಲಾಗಿದೆ. ಈ ಬಾರಿ 2 ತಿಂಗಳಲ್ಲಿ 10,000 ಜಮೀನು ಸರ್ವೆ ಮಾಡುವ ಗುರಿ ಹೊಂದಿದ್ದೇವೆ,” ಎಂದರು.
ಸಿ.ಎಂ. ಚಾಲನೆ ನೀಡಲಿರುವ ₹250 ಕೋಟಿ ಅಭಿವೃದ್ಧಿ ಯೋಜನೆಗಳು ಡಿ. 6 ರಂದು ಮುಖ್ಯಮಂತ್ರಿ ಹಾಸನ ಜಿಲ್ಲೆಯಲ್ಲಿ ಕೆಳಗಿನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ: ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ₹55 ಕೋಟಿ ಚನ್ನರಾಯಪಟ್ಟಣ ನೀರಾವರಿ ಯೋಜನೆ – ₹74 ಕೋಟಿ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿ ಒಟ್ಟು ₹250 ಕೋಟಿ ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಚಿವರು ನೀಡಿದ ಮುಖ್ಯ ನಿರ್ದೇಶನಗಳು ಕಾರ್ಯಕ್ರಮಗಳಿಗೆ ಅನಗತ್ಯ ದುಂದು ವೆಚ್ಚ ಮಾಡಬಾರದು. ಫಲಾನುಭವಿಗಳಿಗೆ ಹಕ್ಕುಪತ್ರ, ಕ್ರಯಪತ್ರ, ಇ-ಸ್ವತ್ತು ಕಡ್ಡಾಯವಾಗಿ ನೀಡಬೇಕು. ನಾಮಮಾತ್ರದ ಹಕ್ಕುಪತ್ರ ವಿತರಣೆ ನಿಲ್ಲಿಸಿ 100% ಇ-ಸ್ವತ್ತು ಮಾಡಲು ಸೂಚನೆ. “ಪೌತಿಖಾತೆ ಆಂದೋಲನ" ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಫಲಾನುಭವಿಗಳಿಗಾಗಿ ಸುರಕ್ಷಿತ ಸಂಚಾರ, ಆಹಾರ ವ್ಯವಸ್ಥೆ, ದಾಖಲೆಗಳ ಸುರಕ್ಷತೆ ಖಚಿತಪಡಿಸಬೇಕು. ವಿಎ, ಪಿಡಿಓಗಳು ಕರೆತಂದ ಜನರಿಗೆ ಸಂಪೂರ್ಣ ಜವಾಬ್ದಾರರಾಗಿರಬೇಕು.
