ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
29-10-2025
ಸತತ ಪ್ರಯತ್ನವೇ ಯಶಸ್ಸಿನ ಮಂತ್ರ: ಡಾ. ಕೆ. ನಾಗಣ್ಣ
ಕೊರಟಗೆರೆ: ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದೇ ಹೊರತು ಸೋಲು–ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಶಿಸ್ತು, ಸಮಯಪಾಲನೆ ಬೆಳೆಸಿಕೊಳ್ಳಬೇಕು ಹಾಗೂ ಕ್ರೀಡಾ ಮನೋಭಾವ ಹೊಂದಿರಬೇಕು ಎಂದು ಗೃಹ ಸಚಿವರ ವಿಶೇಷ ಅಧಿಕಾರಿ ಡಾ. ಕೆ. ನಾಗಣ್ಣ ಹೇಳಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಉಪನಿರ್ದೇಶಕರ ಕಾರ್ಯಾಲಯ ಮಧುಗಿರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೊರಟಗೆರೆ ಇವರ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯು/14 ಹಾಗೂ ಯು/17 ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಎಂದಿಗೂ ವಿಶೇಷ ಗೌರವವಿದೆ. ಮಕ್ಕಳು ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು,” ಎಂದು ಹೇಳಿದರು. ಮಧುಗಿರಿ ಡಿಡಿಪಿಐ ಮಾಧವರೆಡ್ಡಿ ಅವರು ಪ್ರಾಸ್ತಾವಿಕ ನುಡಿಗಳಲ್ಲಿ “ಸೋಲು–ಗೆಲುವು ಎಲ್ಲರಿಗೂ ಸಹಜ. ಆದರೆ ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಶಿಸ್ತು, ಒಳ್ಳೆಯ ಪ್ರಯತ್ನ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
