ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
25-03-2025
ವಿನಯ್ ರೀಲ್ಸ್ ತಂದ ಆಪತ್ತು: ‘ಡೆವಿಲ್’ ಚಿತ್ರೀಕರಣಕ್ಕೆ ಮತ್ತೆ ತೊಂದರೆ?
ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಗೌಡರನ್ನು ಬಸವೇಶ್ವರ ನಗರ ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಇದರಿಂದ ‘ಡೆವಿಲ್’ ಸಿನಿಮಾ ಚಿತ್ರೀಕರಣಕ್ಕೂ ತೊಂದರೆ ಆಗಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
‘ಡೆವಿಲ್’ ಚಿತ್ರತಂಡಕ್ಕೆ ಮತ್ತೆ ಆತಂಕ ಶುರುವಾಗಿದೆ. ಕಾನೂನು ಸಂಕೋಲೆಯಲ್ಲಿರುವ ವಿನಯ್ ‘ಡೆವಿಲ್’ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ವಿನಯ್ ಭಾಗಿಯಾಗಿ ಒಂದು ಹಂತದ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ‘ಡೆವಿಲ್’ ಚಿತ್ರೀಕರಣ ಸದ್ಯ ರಾಜಸ್ಥಾನದಲ್ಲಿ ನಡೆಯುತ್ತಿದ್ದು, ಮಾ.25ರಿಂದ ಏ.2ರವರೆಗೂ ಶೂಟಿಂಗ್ ಇರಲಿದೆ. ಅವಶ್ಯಕತೆ ಇದ್ದರೆ ಕರೆಸಿಕೊಳ್ಳುತ್ತೇವೆ ಎಂದು ನಿರ್ದೇಶಕರು ವಿನಯ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದಲ್ಲದೇ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮುಂದಿನ ಶೆಡ್ಯೂಲ್‌ಗೆ ಡೆವಿಲ್ ಶೂಟಿಂಗ್ ಪ್ಲ್ಯಾನ್ ಮಾಡಲಾಗಿದೆ. ಹಾಗಾಗಿ ವಿನಯ್ ಬಂಧನ ಸಹಜವಾಗಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಇನ್ನೂ ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ದರ್ಶನ್ 9 ತಿಂಗಳು ಜೈಲಿನಲ್ಲಿದ್ದರು. ಇದರಿಂದ ‘ಡೆವಿಲ್’ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಹೀಗಿರುವಾಗ ಸದ್ಯ ಕಾನೂನು ಸಂಕೋಲೆಯಲ್ಲಿರುವ ವಿನಯ್ ಕಡೆಯಿಂದಲೂ ‘ಡೆವಿಲ್’ಗೆ ಎಫೆಕ್ಟ್ ಆಗಲಿದೆಯಾ ಎಂದು ಫ್ಯಾನ್ಸ್ ತಲೆಕಡೆಸಿಕೊಂಡಿದ್ದಾರೆ. ವಿನಯ್ ಪ್ರಕರಣ ಏನೆಲ್ಲಾ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
