ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
13-11-2025
ದಾವಣಗೆರೆ: ಪೊಲೀಸರ ತ್ವರಿತ ಸ್ಪಂದನೆ – ಯುವತಿಯ ಜೀವ ಉಳಿಸಿದ ERSS ಸಿಬ್ಬಂದಿ
ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು: ಚನ್ನಗಿರಿಯ ಸೂಳೆಕೆರೆ (ಶಾಂತಿಸಾಗರ) ಬಳಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳ ಪ್ರಾಣವನ್ನು ERSS-112 ಗಸ್ತು ಸಿಬ್ಬಂದಿ ಸಕಾಲದಲ್ಲಿ ತಲುಪಿ ರಕ್ಷಿಸಿದ್ದಾರೆ. ಮಾಹಿತಿ ಪ್ರಕಾರ, ಸೂಳೆಕೆರೆ ಹತ್ತಿರ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ERSS 112 ವಾಹನದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಗೆ ಸಾಂತ್ವನ ನೀಡಿ, ಅವಳನ್ನು ಆತ್ಮಹತ್ಯೆ ಯತ್ನದಿಂದ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಯುವತಿಯ ಪೋಷಕರನ್ನು ಸಂಪರ್ಕಿಸಿ, ಅವರನ್ನು ಸ್ಥಳಕ್ಕೆ ಕರೆಸಿ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ ಪೋಷಕರಿಗೆ ಅಗತ್ಯ ತಿಳುವಳಿಕೆ ನೀಡಿದರು. ಪೊಲೀಸರ ಸಕಾಲಿಕ ಸ್ಪಂದನೆಯಿಂದ ಮುಗ್ಧ ಯುವತಿಯ ಪ್ರಾಣ ರಕ್ಷಣೆಯಾಗಿದ್ದು, ಸ್ಥಳೀಯರು ಮತ್ತು ಸಾರ್ವಜನಿಕರು ಪೊಲೀಸರ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದಾರೆ.
