ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
15-03-2025
ಪಿಲಿಕುಳ ನಿಸರ್ಗಧಾಮದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣ !
ದಕ್ಷಿಣ ಕನ್ನಡ: ಬಿಸಿಲ ಧಗೆಯನ್ನು ತಾಳಲಾರದೆ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಸೆಕೆ ತಾಳಲಾರದೆ ನೀರು, ತಂಪುಪಾನೀಯ, ಎಳನೀರನ್ನು ಆಶ್ರಯಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಮೂಕ ಪ್ರಾಣಿಗಳು ಇದೇ ಅವಸ್ಥೆಯನ್ನು ಅನುಭವಿಸುತ್ತಿದ್ದು, ಪಿಲಿಕುಳ ನಿಸರ್ಗಧಾಮದ ಪ್ರಾಣಿ - ಪಕ್ಷಿಗಳನ್ನು ಬಿಸಿಲ ಧಗೆಯಿಂದ ಮುಕ್ತಗೊಳಿಸಿ ತಣ್ಣಗಿನ ವಾತಾವರಣ ನಿರ್ಮಿಸುವ ಪ್ರಯತ್ನವನ್ನು ಈ ಬಾರಿಯೂ ಮಾಡಲಾಗಿದೆ.
ಪಿಲಿಕುಳ ನಿಸರ್ಗಧಾಮದ 150 ಎಕರೆ ಪ್ರದೇಶದಲ್ಲಿ ನೂರಾರು ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿ- ಪಕ್ಷಿಗಳಿವೆ. ಹೆಚ್ಚಿನ ಪ್ರಾಣಿ - ಪಕ್ಷಿಗಳು ಸದ್ಯದ ಸೆಕೆಯ ವಾತಾವರಣವನ್ನು ಎದುರಿಸಲಾಗದೆ ಹೈರಾಣಾಗಿದೆ. ಆದ್ದರಿಂದ ಅವುಗಳಿಗೆ ತಣ್ಣನೆಯ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಕುಡಿಯಲು ಯಥೇಚ್ಛವಾಗಿ ನೀರು ಸಿಗುವುದರೊಂದಿಗೆ, ಅವುಗಳು ಸುತ್ತಾಡುವ ಪ್ರದೇಶದಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಪ್ರಾಣಿಗಳನ್ನು ಇರಿಸಲಾಗಿರುವ ಬೋನಿನ ಹೊರಭಾಗದಲ್ಲಿ ಟೇಬಲ್ ಫ್ಯಾನ್ ಸೌಕರ್ಯವನ್ನು ಮಾಡಿಸಲಾಗಿದೆ.
ಬಿಸಿಲ ಧಗೆ ಹೆಚ್ಚಿರುವ ಸಂದರ್ಭದಲ್ಲಿ ಪೈಪ್‌ನಲ್ಲಿ ಪ್ರಾಣಿಗಳ ಮೈಮೇಲೆ ನೀರು ಹಾಯಿಸಲಾಗುತ್ತಿದೆ. ದಿನದಲ್ಲಿ ಸುಮಾರು ಎರಡು-ಮೂರು ಬಾರಿ ನಿಯಮಿತವಾಗಿ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಉದ್ಯಾನವನದಲ್ಲಿ ಪ್ರಾಣಿಗಳು ಓಡಾಡುವ ಸ್ಥಳದ ಮೇಲ್ಭಾಗದಲ್ಲಿ ನೀರಿಗಾಗಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದ್ದು, ಮೇಲಿಂದ ನೀರು ಬೀಳುವ ಸಂದರ್ಭ ಪ್ರಾಣಿಗಳು ಅದಕ್ಕೂ ಮೈಯೊಡ್ಡಿ ನಿಲ್ಲುತ್ತವೆ. ಹಕ್ಕಿಗಳಿಗೂ ಕೂಡ ನೀರು ಚಿಮ್ಮಿಸುವ ಪ್ರಕ್ರಿಯೆ ನಡೆಯುತ್ತದೆ. ಜತೆಗೆ, ಅಲ್ಲಲ್ಲಿ ನೀರಿನ ಕೊಳಗಳು, ಟ್ಯಾಂಕ್ ಗಳನ್ನೂ ಅಳವಡಿಸಲಾಗಿದೆ.
ಕೆಲವೊಂದು ಪ್ರಾಣಿಗಳ ಗೂಡಿನ ಮೇಲ್ಛಾವಣಿ ಮೇಲೆ ಬಿಳಿ ಬಣ್ಣದ ಪೈಂಟ್‌ಗಳನ್ನು ಬಳಿಯಲಾಗಿದೆ. ಈ ಬಿಳಿ ಬಣ್ಣವು ಬಿಸಿಲನ್ನು ಹೀರಿ ತಂಪು ನೀಡುತ್ತದೆ. ಜತೆಗೆ ಕೆಲವೊಂದು ಪ್ರಾಣಿಗಳ ಬೋನಿನ ಮೇಲ್ಛಾವಣಿಗೆ ತೆಂಗಿನ ಸೋಗೆಗಳನ್ನೂ ಹಾಕಲಾಗಿದೆ. ಹಾವುಗಳಿಗೂ ಮೇಲಿನಿಂದ ನೀರನ್ನು ಸ್ಪ್ರಿಂಕ್ಲರ್ ಮೂಲಕ ಹಾಯಿಸಿ ತಣ್ಣಗಿನ ವಾತಾವರಣ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಮೂಕ ಪ್ರಾಣಿಗಳನ್ನು ಬಿಸಿಲ ಧಗೆಯಿಂದ ರಕ್ಷಿಸುವ ಉದ್ದೇಶದಿಂದ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.
