ವರದಿಗಾರರು :
ಹುಣಸೂರು ||
ಸ್ಥಳ :
ಹುಣಸೂರು
ವರದಿ ದಿನಾಂಕ :
02-12-2025
ಹುಣಸೂರು ತಹಸೀಲ್ದಾರ್ ಮಂಜುನಾಥ್ ಅವರ ಮುಂದಾಳತ್ವದಲ್ಲಿ ಬಿಳಿಗೆರೆ ಗ್ರಾಮದ ದಲಿತರಿಗೆ ದೇವಸ್ಥಾನಕ್ಕೆ ಮುಕ್ತ �
ಗಾವಡಗೆರೆ ಹೋಬಳಿ ಬಿಳಿಗೆರೆ ಗ್ರಾಮದ ದಲಿತರಿಗೆ 14 ವರ್ಷಗಳ ಬಳಿಕ ದೇವಸ್ಥಾನ ಪ್ರವೇಶ ದೊರೆತಿದ್ದು, ಈ ಮಹತ್ವದ ಕ್ರಮಕ್ಕೆ ಹುಣಸೂರು ತಹಸೀಲ್ದಾರ್ ಮಂಜುನಾಥ್ ಅವರ ಮಧ್ಯಸ್ಥಿಕೆ ಕಾರಣವಾಯಿತು. 01-12-2025 ರಂದು ಸೋಮವಾರ, ದಲಿತರು ಮತ್ತು ಸವರ್ಣೀಯರು ಒಟ್ಟಾಗಿ ಮಲ್ಲೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯ ನಡೆಸುವ ಮೂಲಕ ಸಾಮಾಜಿಕ ಸೌಹಾರ್ದದ ನೂತನ ಅಧ್ಯಾಯ ಆರಂಭವಾಯಿತು. ಬಿಳಿಗೆರೆ ಗ್ರಾಮದ ಮುಜರಾಯಿ ಇಲಾಖೆಯಡಿ ಬರುವ ಈ ದೇವಾಲಯದಲ್ಲಿ ಕಳೆದ 14 ವರ್ಷಗಳಿಂದ ಪೂಜಾ ಕಾರ್ಯ ನಿಂತು ಹೋಗಿತ್ತು. ದಲಿತರು ‘ನಮಗೂ ಮುಕ್ತ ಪ್ರವೇಶ ದೊರಕಬೇಕು’ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೆಲವು ಸವರ್ಣೀಯರು ಪೂಜಾ ಕಾರ್ಯ ಮತ್ತು ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ದಲಿತರು ಮತ್ತು ದಸಂಸದ ಸಂಘಟನೆಯವರು ಇದಕ್ಕಾಗಿ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು.
ಈ ವಿಚಾರ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಂಜುನಾಥ್ ಅವರು ಇಬ್ಬರ ಸಮುದಾಯದ ಮುಖಂಡರನ್ನು ಪ್ರತ್ಯೇಕವಾಗಿ ಸಭೆಗೂಡಿ ಮಾತುಕತೆ ನಡೆಸಿ, ಸಮಸ್ಯೆಯನ್ನು ಮುಂದೂಡುವುದರಿಂದ ಗ್ರಾಮದಲ್ಲಿ ಸೌಹಾರ್ದ ಕಡಿಮೆಯಾಗುತಿದೆ ಎಂದು ತಿಳಿಸಿ ಸಮಾಧಾನಕ್ಕೆ ಕರೆನೀಡಿದರು. ಅವರ ನೊಂದ ಮನವಿಗೆ ಸ್ಪಂದಿಸಿದ ಸವರ್ಣೀಯ ಮುಖಂಡರು ದೇವಾಲಯಕ್ಕೆ ಸುಣ್ಣ-ಬಣ್ಣ ಹಚ್ಚಿ, ಪೂಜೆಗಾಗಿ ತಯಾರಿ ನಡೆಸಿದರು. ನಂತರ ಇಬ್ಬರೂ ಸಮುದಾಯದ ಮುಖಂಡರು ಹಾಗೂ ತಾಲ್ಲೂಕು ಮಟ್ಟದ ಸಂಘಟನಾ ಪ್ರತಿನಿಧಿಗಳ ಸಮ್ಮುಖದಲ್ಲಿ ದೇವಾಲಯದಲ್ಲಿ ಒಟ್ಟಾಗಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುನಿಯಪ್ಪ ಅವರು, “ದೇವಾಲಯದ ಸಮಸ್ಯೆ ಹಲವಾರು ವರ್ಷಗಳಿಂದ ಬಾಕಿಯಾಗಿತ್ತು. ಈಗ ಇಬ್ಬರ ಸಮುದಾಯದ ಸಮ್ಮತಿಯಿಂದ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಇದಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು; ಅಗತ್ಯವಿದ್ದರೆ ರೌಡಿ ಶೀಟ್ ತೆರೆಯಲಾಗುವುದು,” ಎಂದು ಎಚ್ಚರಿಸಿದರು
ದಸಂಸದ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, “ಕಳೆದ 14 ವರ್ಷಗಳಿಂದ ದಲಿತರಿಗಾಗಿ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಯದೆ ಉಳಿಯುತ್ತಿತ್ತು. ತಹಸೀಲ್ದಾರ್ ಮಂಜುನಾಥ್ ಅವರು ಕಾಳಜಿಯಿಂದ ಮುಂದಾಗಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿದ್ದಾರೆ,” ಎಂದು ಅಭಿನಂದಿಸಿದರು. ರೈತ ಸಂಘದ ಹೊಸೂರು ಕುಮಾರ್ ಮಾತನಾಡಿ, “ಅಸ್ಪೃಶ್ಯತೆ ಒಂದು ಮಾನಸಿಕ ರೋಗ. ಕಾನೂನಿನಿಂದ ಮಾತ್ರ ಪರಿಹಾರ ಸಾಧ್ಯವಿಲ್ಲ; ಜಾಗೃತಿ ಮತ್ತು ಸೌಹಾರ್ದವೇ ಮುಖ್ಯ. ಈ ಕೆಲಸವನ್ನು ತಹಸೀಲ್ದಾರ್ ಮಂಜುನಾಥ್ ಅವರು ಮಾಡಿದ್ದಾರೆ,” ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಭರತ್, ಪಿಡಿಓ ಶೀಲಾ, ಕಾರ್ಯದರ್ಶಿ ಆನಂದ್, ರಾಜಸ್ವ ನಿರೀಕ್ಷಕ ಹೇಮಂತ್ ಕುಮಾರ್, ಗ್ರಾಮ ಆಡಳಿತಾಧಿಕಾರಿಗಳು, ಕುರುಬ ಮತ್ತು ದಲಿತ ಸಮುದಾಯದ ಯಜಮಾನರು, ವಿವಿಧ ಸಂಘಟನಾ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಾಲಯದ ಅರ್ಚಕರಾದ ಮಹದೇವಪ್ಪ ಮತ್ತು ಸುರೇಶ್ ಅವರು ತಹಸೀಲ್ದಾರ್ ಹಾಗೂ ಮುಖಂಡರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಸಿ ಪ್ರಸಾದ ವಿತರಿಸಿದರು.
